ಬೆಂಗಳೂರು: ನಗರದ ಆಡಗೊಡಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಬಾಲಕನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಸ್ಪೋಟ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಮೇಲ್ನೋಟಕ್ಕೆ ಸಿಲಿಂಡರ್ ಬ್ಲಾಸ್ಟ್ ಆಗಿದೆ ಎನ್ನಲಾಗಿದೆ. ಕಸ್ತೂರಮ್ಮ ಎನ್ನುವವರ ಮನೆಯಲ್ಲಿ ಈ ಸ್ಫೋಟ ಸಂಭವಿಸಿದೆ. ವರಾಂಡ ರೀತಿಯ ಮನೆ ಆಗಿದ್ದರಿಂದ ಎಲ್ಲಾ ಮನೆಗಳು ಬಿದ್ದಿವೆ. ಹಾನಿಯಾದ ಮನೆ ರಿಪೇರಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಮುಬಾರಕ್ ಎಂಬ ಹುಡುಗ ಸಾವನ್ನಪ್ಪಿದ್ದಾನೆ. 9 ಜನರಿಗೆ ಗಾಯಗಳಾಗಿವೆ. ಕಸ್ತೂರಮ್ಮಗೆ ಜಾಸ್ತಿ ಸುಟ್ಟ ಗಾಯಗಳಾಗಿದ್ದು, ಆಕೆಯ ಚಿಕಿತ್ಸೆಯನ್ನು ಸರ್ಕಾರ ಭರಿಸುತ್ತದೆ. ಪಕ್ಕದ ಮನೆಯವರ ಕಟ್ಟಡಗಳಿಗೂ ಹಾನಿಯಾಗಿದೆ. ಇದರ ಬಗ್ಗೆಯೂ ಗಮನಹರಿಸಲಾಗುತ್ತದೆ ಎಂದಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಸಿಲಿಂಡರ್ ಸ್ಫೋಟಗೊಂಡಿದೆ ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.



















