ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಈಗಾಗಲೇ 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಕಾರ್ಯದರ್ಶಿಯಾಗಿರುವ ಮನೋಜ್ ಗೋವಿಲ್ ಅವರು 8ನೇ ವೇತನ ಆಯೋಗದ ಜಾರಿ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. 2026ರ ಏಪ್ರಿಲ್ ನಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾಗೆ ಮನೋಜ್ ಗೋವಿಲ್ ಅವರು ಸಂದರ್ಶನ ನೀಡಿದ್ದಾರೆ. ಇದೇ ವೇಳೆ ಅವರು 8ನೇ ವೇತನ ಆಯೋಗದ ಜಾರಿ ಕುರಿತು ಪ್ರಸ್ತಾಪಿಸಿದ್ದಾರೆ. “ಇದೇ ವರ್ಷದ ಏಪ್ರಿಲ್ ವೇಳೆಗೆ ವೇತನ ಆಯೋಗ ರಚನೆಯಾಗಲಿದೆ. ವೇತನ ಆಯೋಗ ರಚಿಸಿದ ಬಳಿಕ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಬೇಕಾಗುತ್ತದೆ. ನಂತರವೇ ಶಿಫಾರಸುಗಳ ರಚನೆ ಆರಂಭವಾಗುತ್ತದೆ” ಎಂದು ತಿಳಿಸಿದ್ದಾರೆ.
ವೇತನ ಆಯೋಗ ರಚನೆಯಾದ ಬಳಿಕ ವರದಿ ರಚಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ವೇತನ ಆಯೋಗದ ವರದಿಗಳನ್ನು ಪರಿಶೀಲಿಸಿದ ನಂತರ ಕೇಂದ್ರ ಸರ್ಕಾರ ಅನುಮೋದನೆ ನೀಡುತ್ತದೆ. ಹಾಗಾಗಿ, 2026ರ ಜನವರಿ 1ರಿಂದ ಯೋಜನೆ ಜಾರಿಯಾಗುವುದಿಲ್ಲ. 2026ರ ಏಪ್ರಿಲ್ ನಿಂದ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಇದಕ್ಕಾಗಿ ಕೇಂದ್ರ ಸರ್ಕಾರವು 7 ಸಾವಿರ ಕೋಟಿ ರೂ.ಗಿಂತ ಅಧಿಕ ಹಣ ವ್ಯಯಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.