ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದಾಗಿದೆ. ಸುಪ್ರೀಂ ಕೋರ್ಟ್ ಇಂದು (ಗುರುವಾರ, ಆ.14) ಜಾಮೀನು ರದ್ದು ಮಾಡಿ ಆದೇಶ ಪ್ರಕಟಿಸಿದೆ. ಈ ಮೂಲಕ ʼಡಿʼ ಕಂಪೆನಿಗೆ ಶಾಕ್ ನೀಡಿದೆ.
ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಮಹದೇವನ್ ಅವರ ದ್ವಿಸದಸ್ಯ ನ್ಯಾಯಪೀಠ ದರ್ಶನ್, ಪವಿತ್ರಾ ಸೇರಿ ಏಳು ಮಂದಿ ಆರೋಪಿಗಳ ಜಾಮೀನು ರದ್ದು ಪಡಿಸಿ ಅರ್ಜಿ ತೀರ್ಪು ಪ್ರಕಟಿಸಿದೆ.
ದರ್ಶನ್ ಮತ್ತು ಇತರೆ ಆರೋಪಿಗಳ ಜಾಮೀನು ರದ್ದಾದ ಹಿನ್ನೆಲೆ ಮೋಹಕತಾರೆ ರಮ್ಯಾ ಅವರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ತೀರ್ಪನ್ನು ತೀವ್ರ ಸಂತೋಷದಿಂದ ಸ್ವಾಗತಿಸಿದ್ದಾರೆ.
“ರಮ್ಯಾ ಪೋಸ್ಟ್ ನಲ್ಲಿ ಏನಿದೆ?:”
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರರಿಗೆ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಇಂದು ಬಲವಾದ ಸಂದೇಶವನ್ನು ರವಾನಿಸಿದೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದಿದ್ದಾರೆ.
ನ್ಯಾಯಯುತ ಪ್ರಕ್ರಿಯೆಯನ್ನು ಅನುಸರಿಸಿ, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇರಿಸಿ. ಇದು ದೀರ್ಘ ಮತ್ತು ಕಠಿಣ ಆದರೆ, ಕೊನೆಯಲ್ಲಿ ಬೆಳಕು ಇದ್ದೇ ಇರುತ್ತದೆ. ಕಾನೂನನ್ನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ, ನ್ಯಾಯ ನೀಡಲಾಗಿದೆ. ಮುಖ್ಯವಾಗಿ, ನಿಮ್ಮ ಪ್ರಜ್ಞೆಗೆ ನಿಷ್ಠರಾಗಿರಿ ಎಂದು ನಾನು ಹೇಳಲು ಬಯಸುತ್ತೇನೆ ಎಂದು ರಮ್ಯಾ ತಮ್ಮ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ನಟಿ ರಮ್ಯಾ ರೇಣುಕಾಸ್ವಾಮಿ ಅವರಿಗೆ ನ್ಯಾಯ ಸಿಗಬೇಕೆನ್ನುವ ಹಾಗೆ ಪೋಸ್ಟ್ ಹಾಕಿದ್ದರು. ಇದಕ್ಕೆ ದರ್ಶನ್ ಅಭಿಮಾನಿಗಳು ರಮ್ಯಾ ಅವರಿಗೆ ಅಶ್ಲೀಲ ಸಂದೇಶ, ಕಮೆಂಟ್ ಮಾಡಿದ್ದರು. ಈ ಸಂಬಂಧಿಸಿದಂತೆ ರಮ್ಯಾ ಅವರು ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದೆ.



















