ಬಾಗಲಕೋಟೆ: ಇಂದು ಎಸ್ಸೆಸ್ಸೆಲ್ಸಿ ಫಿಲಿತಾಂಶ ಪ್ರಕಟವಾಗಿದೆ. ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಉತ್ತಮ ಅಂಕ ಗಳಿಸಿರುವ ಮಕ್ಕಳ ಪೋಷಕರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಇಲ್ಲೋರ್ವ ಬಾಲಕ 6ಕ್ಕೆ 6 ವಿಷಯದಲ್ಲಿ ಫೇಲ್ ಆದರೂ ಕುಟುಂಬಸ್ಥರು ಸಿಹಿ ತಿನ್ನಿಸಿ ಆತ್ಮಸ್ಥೈರ್ಯ ಮೂಡಿಸಿದ್ದಾರೆ.
ಬಾಗಲಕೋಟೆ ನವನಗರದ ವಿದ್ಯಾರ್ಥಿಯೋರ್ವ ಆರಕ್ಕೆ ಆರು ವಿಷಯದಲ್ಲೂ ಫೇಲ್ ಆಗಿದ್ದ. ನಗರದ ಬಸವೇಶ್ವರ ಹೈಸ್ಕೂಲ್ನಲ್ಲಿ ಆಂಗ್ಲ ಮಾಧ್ಯಮದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ ಕೇವಲ 200 ಅಂಕ ಪಡೆದು ಅನುತ್ತೀರ್ಣನಾಗಿದ್ದಾನೆ. ಆದರೂ ಆತನಿಗೆ ಏನೂ ಅನ್ನದೇ, ಸಿಹಿ ತಿನ್ನಿಸಿ ಆತ್ಮಸ್ಥೈರ್ಯ ಮೂಡಿಸಿದ್ದಾರೆ.
ಅಭಿಷೇಕ್ 15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ನೆನಪಿನ ಶಕ್ತಿ ಕಳೆದುಕೊಂಡಿದ್ದ ಎನ್ನಲಾಗಿದೆ. ಹೀಗಾಗಿಯೇ ಆತನಿಗೆ ಉತ್ತಮವಾಗಿ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಕುಟುಂಬಸ್ಥರು ಆತನಿಗೆ ಆತ್ಮಸ್ಥೈರ್ಯ ಮೂಡಿಸುವ ಕಾರ್ಯ ಮಾಡಿದ್ದಾರೆ. ಆದರೂ ಬಾಲಕ ನಾನು ಸಾಧಿಸಿಯೇ ಸಾಧಿಸುತ್ತೇನೆ ಎಂದಿದ್ದಾನೆ.