ಸ್ವಾತಂತ್ರ್ಯ ಹೋರಾಟವು ದೇಶಭಕ್ತಿ ಬಲಪಡಿಸುವ ಒಂದು ಅಭಿವ್ಯಕ್ತಿ. ಭಾರತದ ವಿಷಯಕ್ಕೆ ಬಂದರೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಾಗೂ ದೇಶಪ್ರೇಮ ಇಂದಿಗೂ ವರ್ಣನೀಯ. ಅವಿಸ್ಮರಣೀಯ. ಹೀಗಾಗಿಯೇ ಏನೋ ದೇಶದ ಪ್ರತಿಯೊಂದು ಕುಡಿಯಲ್ಲೂ ದೇಶಾಭಿಮಾನ ಎಂಬುವುದು ರಕ್ತಗತವಾಗಿ ಬಂದು ಬಿಟ್ಟಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯರ ಪಾತ್ರ ಗಮನಿಸಿದರೆ, ಅದನ್ನು ಇಡೀ ವಿಶ್ವವೇ ಒಪ್ಪಿಕೊಳ್ಳುತ್ತದೆ.

ಹೌದು! ಭಾರತ ಇಂದು 79ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದೆ. ಇಡೀ ಭಾರತ ಇಂದು ಈ ಸಂಭ್ರಮದಲ್ಲಿ ಮಿಂದೇಳುತ್ತಿದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕು 79 ವರ್ಷಗಳು ಕಳೆದಿವೆ. ಅದು ಎಲ್ಲರಿಗೂ ಗೊತ್ತು. ಆದರೆ, ಭಾರತದ ಅದರಲ್ಲೂ ಕರ್ನಾಟಕದ ಒಂದು ಪ್ರದೇಶ ಮಾತ್ರ ಸ್ವಾತಂತ್ರ್ಯ ಸಂಗ್ರಾಮದ ಮಧ್ಯೆಯೇ ಸ್ವಾತಂತ್ರ್ಯ ಪಡೆದಿದ್ದು, ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು ಎಂದರೆ ಎಲ್ಲರೂ ನಂಬಲೇಬೇಕು. ಅದೇ ಏಸೂರು ಕೊಟ್ಟರೂ ಈಸೂರು ಬಿಡೆವು..!

ಇದು ಕೇವಲ ಘೋಷಣೆಯಲ್ಲ. ಇದೊಂದು ಕ್ರಾಂತಿ. ಹೀಗಾಗಿಯೇ ಶಿಕಾರಿಪುರ ತಾಲೂಕಿನ ಈಸೂರು ಎಂಬ ಪುಟ್ಟ ಗ್ರಾಮ ಭಾರತದ ಭೂಪಟದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದ ಸಂದರ್ಭದಲ್ಲಿ ಚಲೇಜಾವ್ ಚಳುವಳಿ ಎಂಬುವುದು ಮಹತ್ತರ ಘಟ್ಟ ಪಡೆದಿತ್ತು. ಇದರಿಂದ ಪ್ರೇರೇಪಿತರಾದ ಈ ಗ್ರಾಮದ ಹೋರಾಟಗಾರರು ದೇಶದಲ್ಲಿಯೇ ಮೊದಲ ಬಾರಿಗೆ ತಾವು ಸ್ವತಂತ್ರರು ಎಂದು ಘೋಷಿಸಿಕೊಂಡಿದ್ದರು.
ಮಹಾತ್ಮಾ ಗಾಂಧೀಜಿ ಅವರು ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಘರ್ಜಿಸಿದ್ದರು. ಇದನ್ನೇ ಚಲೇಜಾವ್ ಅಂದರೆ ಕ್ವಿಟ್ ಇಂಡಿಯಾ ಚಳುವಳಿ ಎಂದು ಕರೆಯಲಾಯಿತು. ಗಾಂಧೀಜಿಯ ಈ ನುಡಿಯಿಂದ ಪ್ರೇರಿತರಾದ ಈಸೂರು ಗ್ರಾಮದ ಜನ 1942ರ ಸೆಪ್ಟೆಂಬರ್ 27ರಂದು ಈಸೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇಶದ ಬಾವುಟ ಹಾರಿಸಿದ್ದರು.

ಈ ಮೂಲಕ ಈಸೂರು ದೇಶದ ಮೊದಲ ಸ್ವಾತಂತ್ರ್ಯಘೋಷಿತ ಸರಕಾರ ಹಾಗೂ ಗ್ರಾಮ ಎಂದು ಹೆಸರು ಪಡೆದುಕೊಂಡಿತು. ಇದು ದೊಡ್ಡ ಸಂಘರ್ಷಕ್ಕೆ ಕಾರಣವಾಯಿತು. ಇಡೀ ಕೆಂಪುಮುಖದ ನಾಯಿಗಳೆಲ್ಲ ಅಂದು ಈಸೂರನ್ನು ಹೊಕ್ಕು ಸಿಕ್ಕಸಿಕ್ಕವರ ಮೇಲೆ ಹಲ್ಲೆ ನಡೆಸಿದ್ದವು. ಈ ಗಲಾಟೆಯಲ್ಲಿ ಸಾಕಷ್ಟು ಸಾವು-ನೋವುಗಳು ಸಂಭವಿಸಿದ್ದವು. ಈಸೂರು ಹೋರಾಟಗಾರರು ಸೇರಿದಂತೆ ಬ್ರಿಟಿಷ್ ಅಧಿಕಾರಿಗಳು ಕೂಡ ಸಾವನ್ನಪ್ಪಿದ್ದರು. ಇಡೀ ಊರಿಗೆ ಮಿಲಿಟರಿ ಪಡೆ ನುಗ್ಗಿದ್ದರಿಂದ ಊರಿನ ಜನ ಕಾಡು ಸೇರಿದರು. ಈ ಸಂದರ್ಭ ಊರನ್ನು ಲೂಟಿ ಮಾಡಿದ ಮಿಲಿಟರಿ ಪಡೆ ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿತು. ಆನಂತರ ಮಹಿಳೆಯರು ಸೇರಿದಂತೆ ಸುಮಾರು 50ಕ್ಕೂ ಅಧಿಕ ಜನರು ಬಂಧಿಯಾಗಿದ್ದರು. ನಂತರ ತನಿಖೆ ನಡೆಸಿ, 22 ಜನರನ್ನು ನಿರಪರಾಧಿಗಳೆಂದು ಘೋಷಿಸಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.

ಈಸೂರು ಸ್ವಾತಂತ್ರ್ಯಕ್ಕೆ ಕಾರಣೀಭೂತರಾಗಿದ್ದ ಕೆ. ಗುರುಪ್ಪ, ಮಲ್ಲಪ್ಪ ಅವರನ್ನು 1943 ಮಾರ್ಚ್8 ರಂದು ಹಾಗೂ ಸೂರ್ಯನಾರಾಯಣಾಚಾರ್, ಹಾಲಪ್ಪ ಅವರನ್ನು ಮಾರ್ಚ್ 9ರಂದು ಮತ್ತು ಶಂಕರಪ್ಪ ಅವರನ್ನು ಮಾರ್ಚ್10ರಂದು ಗಲ್ಲಿಗೇರಿಸಲಾಯಿತು. ಈ ಶಿಕ್ಷೆ ಇಡೀ ಈಸೂರಿನಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿತ್ತು. ರಕ್ತ ಕ್ರಾಂತಿಗೆ ಸಾಕ್ಷಿಯಾಗಿದ್ದ ಈಸೂರು ಮತ್ತೆ ಕೊತಕೊತ ಕುದಿಯಲು ಆರಂಭಿಸಿತು.

ಈಸೂರು ದಂಗೆಯು ಕರ್ನಾಟಕದ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಪ್ರಮುಖ ಘಟನೆಯಾಗಿತ್ತು. ನಂತರ ಈ ಘಟನೆಯು ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿತು. ರಾಜ್ಯಾದ್ಯಂತ ಬ್ರಿಟಿಷ್ ಆಡಳಿತದ ವಿರುದ್ಧ ಹೋರಾಡಲು ಪ್ರೇರೇಪಣೆ ನೀಡಿತು. ಈಸೂರು ಜನರು ಕರ ನಿರಾಕರಣೆ ಮಾಡಿ ಪ್ರಭುತ್ವ ತೋರಲು ಬಂದಿದ್ದ ಬ್ರಿಟಿಷ್ ಅಧಿಕಾರಿಗಳನ್ನು ಥಳಿಸಿದ್ದರು. ಬ್ರಿಟಿಷರಿಗೆ ಬಹಿರಂಗವಾಗಿ ಸವಾಲು ಹಾಕಿ ಸ್ವಾತಂತ್ರ್ಯ ಘೋಷಿಸಿಕೊಂಡು ಚರಿತ್ರೆಯಲ್ಲಿ ಪುಟ ಸೇರಿದ ಈ ಹಳ್ಳಿಯ ರೋಚಕ ಕಥಾನಕವೇ ಮುಂದೆ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಇಂಬು ನೀಡಿತು. ಈಗಲೂ ಈ ಗ್ರಾಮ ಪ್ರವೇಶಿಸುತ್ತಿದ್ದಂತೆ ದೊಡ್ಡ ಧ್ವಜಸ್ತಂಭ ಕಾಣುತ್ತದೆ. ಕಂಬದ ಮೇಲಿನ ಅಕ್ಷರಗಳ ಮೇಲೆ ಕಣ್ಣಾಡಿಸಿದರೆ ‘ಏಸೂರು ಕೊಟ್ಟರೂ ಈಸೂರು ಕೊಡೆವು’ ಎಂಬ ಘೋಷಣೆ ಕಾಣುತ್ತದೆ. ಅದರ ಕೆಲವು ಹೆಸರುಗಳನ್ನು ಬರೆಸಲಾಗಿದೆ. ಆ ವ್ಯಕ್ತಿಗಳು 1943ರಲ್ಲಿ ಬ್ರಿಟಿಷರಿಂದ ಗಲ್ಲುಶಿಕ್ಷೆಗೆ ಒಳಗಾದ ಇದೇ ಗ್ರಾಮದ ಕೆಚ್ಚೆದೆಯ ರೈತರು.

ಈ ಗ್ರಾಮದಲ್ಲಿ ಐತಿಹಾಸಿಕ ವೀರಭದ್ರ ಸ್ವಾಮಿ ದೇವಾಲಯವೊಂದು ಇಲ್ಲಿದೆ. ಹೋರಾಟದ ರೂಪರೇಷೆ ಅದರ ಮುಂದೆ ಹೋರಾಟದ ರೂಪುರೇಶೆಗಳೆಲ್ಲವೂ ತಯಾರಾಗುತ್ತಿತ್ತು. ಅಲ್ಲಿ ಪ್ರಮುಖ ವಿಷಯಗಳ ಸಭೆಗೆ ದೇಗುಲವೇ ವೇದಿಕೆಯಾಗಿತ್ತು. ಈ ಸಭೆಯಲ್ಲಿ ತೀರ್ಮಾನವಾದಂತೆ 1942ರ ಸೆ.27ರಂದು ಈ ದೇವಾಲಯದ ಮೇಲೆ ಪ್ರತ್ಯೇಕ ಧ್ವಜ ಹಾರಿಸಿಯೇ ಬಿಟ್ಟಿದ್ದರು. ಬ್ರಿಟಿಷ್ ಅಧಿಕಾರಿಗಳಿಗೆ ಗಾಂಧಿ ಟೋಪಿ ಹಾಕಿಸಿ ಅವರಿಂದ ಘೋಷಣೆ ಕೂಗಿಸುತ್ತಿದ್ದರು. ಇದೇ ಕಾರಣಕ್ಕೆ ಈಸೂರಿನಲ್ಲಿ ದಂಗೆ ಆರಂಭವಾಗಿತ್ತು. ಭಾರತದ ನಕಾಶೆಯಲ್ಲಿ ಚುಕ್ಕಿಯಂತೆ ಕಾಣುವ ಊರಲ್ಲಿ ಹೋರಾಟದ ಪರ್ವವೇ ಆರಂಭವಾಯ್ತು.

ಈಸೂರು ಚಿಕ್ಕಹಳ್ಳಿ ಇಲ್ಲಿದ್ದವರೆಲ್ಲರೂ ಬಡ ರೈತರು. ಇಲ್ಲಿನ ಜನರು ಅದ್ಯಾವ ರೀತಿ ಕ್ರಾಂತಿಯ ಹಾದಿ ಹಿಡಿದರು ಎಂಬುವುದು ಬ್ರಿಟಿಷರ ತಲೆನೋವಾಗಿತ್ತು. ಆದರೆ, ಈ ಹೋರಾಟದ ಹಿಂದೆ ಊರ ಸಾಹುಕಾರ್ ಇದ್ದರು. ಸಾಹುಕಾರ್ ಬಸವಣ್ಯಪ್ಪ, ಶಾಂತವೀರಪ್ಪ, ಹಾಲಮ್ಮ ಎಂಬುವರು ಹೋರಾಟದ ನೇತೃತ್ವ ವಹಿಸಿದ್ದರು. ಈಸೂರಿನ ಹೋರಾಟಕ್ಕೆ ಎಲ್ಲಿಂದ ಹಣ ಬರುತ್ತೆ ಎಂಬ ಜಾಡು ಹಿಡಿದು ಹೊರಟ ಬ್ರಿಟಿಷ್ ಸರ್ಕಾರದ ಅಧಿಕಾರಿಗಳಿಗೆ ಎದುರಾಗಿದ್ದು ಬಸವಣ್ಯೆಪ್ಪ ಎಂಬ ಕೆಚ್ಚೆದೆಯ ವೀರ. ಆ ವೇಳೆ ಸಾಹುಕಾರರ ಮನೆಗೆ ನುಗ್ಗಿದ್ದ ಬ್ರಿಟಿಷ್ ಪಡೆ ಖಜಾನೆ ದೋಚಿ, ಮನೆಗೆ ಬೆಂಕಿ ಇಟ್ಟಿದ್ದರು. ಆ ವೇಳೆ ಭೂಗತರಾಗಿದ್ದ ಬಸವಣ್ಯೆಪ್ಪ ಹಲವು ದಿನಗಳ ನಂತರ ಇಹಲೋಕ ತ್ಯಜಿಸಿದ್ದರು ಎನ್ನಲಾಗಿದೆ.
ಆ ವೇಳೆ ಇಡೀ ಗ್ರಾಮವನ್ನೇ ಕೊಳ್ಳೆ ಹೊಡೆದು ದೋಚಿದ ಅಧಿಕಾರಿಗಳು, ಹೋರಾಟದ ರೂವಾರಿಗಳನ್ನು ವಶಕ್ಕೆ ಪಡೆದಿದ್ದರು. ಇಂದಿಗೂ ಅಲ್ಲಿನ ಒಂದೊಂದು ಕಲ್ಲುಗಳು ಅಂದಿನ ಧೀರರ ಸಾಹಸಗಾಥೆಗಳನ್ನು ಹೇಳುತ್ತಿವೆ.



















