ಮೈಸೂರು: ಇಲ್ಲಿಯ ಉದಯಗಿರಿ ಗಲಭೆ ದೊಡ್ಡ ಮಟ್ಟದ ವಿವಾದಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಕಲ್ಲು ತೂರಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಗಲಭೆಯಲ್ಲಿ 1 ಸಾವಿರಕ್ಕೂ ಹೆಚ್ಚು ಜನ ಇದ್ದರು ಎಂದು ಪೊಲೀಸರು ಹೇಳಿದ್ದು, ಅವರ ವಿರುದ್ಧ ಎಫ್ ಐಆರ್(FIR) ದಾಖಲಿಸಲಾಗಿದೆ.
ಈಗಾಗಲೇ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ, ಪೊಲೀಸ್ ಇಲಾಖೆಗೆ ಸಂಬಂದಿಸಿದ ವಾಹನಗಳಿಗೆ ಹಾನಿ, ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಇದರಿಂದ ಪೊಲೀಸರ ಸಾವು ಸಂಭವಿಸಬಹುದು ಎಂದು ತಿಳಿದು ಕಲ್ಲು ತೂರಾಟ ಮಾಡಿ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆಂದು ಮುಸ್ಲಿಂ ಯುವಕರ ಮೇಲೆ ಉದಯಗಿರಿ ಪೊಲೀಸ್ ಠಾಣಾ ಪಿಎಸ್ಐ ಸುನೀಲ್ ಸಿ.ಎನ್ ದೂರು ನೀಡಿರುವುದನ್ನು ಉಲ್ಲೇಖಿಸಲಾಗಿದೆ.
ಈಗಾಗಲೇ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. 60ಕ್ಕೂ ಅಧಿಕ ಜನರ ಗುರುತು ಪತ್ತೆ ಮಾಡಿದ್ದಾರೆ. ಮೊಬೈಲ್ ಟವರ್ ಆಧಾರದ ಮೇಲೆ ಮೊನ್ನೆ ರಾತ್ರಿ ಮನೆಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಕ್ಯಾಮರಾ, ಡಿವಿಎರ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ ಪೊಲೀಸರು, ಆರೋಪಿಗಳನ್ನ ಬಂಧಿಸಿದ್ದಾರೆ. ಗಲಾಟೆಗೆ ಮುಫ್ತಿ ಮುಷ್ತಾಕ್ ಮಕ್ಬೋಲಿಯ ಭಾಷಣವೇ ಕಾರಣವಾಯ್ತಾ ಎಂಬ ಶಂಕೆ ವ್ಯಕ್ತವಾಗಿದ್ದು, ಇದೀಗ ಪರಾರಿಯಾಗಿರುವ ಮುಸ್ತಾಕ್ ಪತ್ತೆಗೆ ಕೂಡ ಬಲೆ ಬೀಸಲಾಗಿದೆ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂಗಳಾದ ಅಖಿಲೇಶ್ ಯಾದವ್(Akhilesh Yadav) ಹಾಗೂ ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಭಾವಚಿತ್ರವನ್ನು ವ್ಯಂಗ್ಯವಾಗಿ ಹಾಕಿದ್ದಕ್ಕೆ ಮುಸ್ಲಿಂ ಯುವಕರು ಗಲಾಟೆ ನಡೆಸಿದ್ದಾರೆ. ಅದು ವಿಕೋಪಕ್ಕೆ ತೆರಳಿದೆ.