ಬೆಂಗಳೂರು: ನೌಕರರ ರಾಜ್ಯ ವಿಮಾ ನಿಗಮದಲ್ಲಿ (ESIC) ಖಾಲಿ ಇರುವ ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಇಎಸ್ಐಸಿಯಲ್ಲಿ ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ ಮತ್ತು ಕಿರಿಯ ವಿಭಾಗ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಆಫ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಮೇ 26ರೊಳಗೆ ಸ್ಪೀಡ್ ಪೋಸ್ಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳಿಗೆ 45 ವರ್ಷ ಮೀರಿರಬಾರದು. ಅಲ್ಲದೇ ಇಎಸ್ಐಸಿ ಉದ್ಯೋಗಿಗಳು ಮತ್ತು ಸರ್ಕಾರಿ ನೌಕರರಿಗೆ 5 ವರ್ಷಗಳವರೆಗೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ. ಸ್ಪೆಷಲಿಸ್ಟ್ ಗ್ರೇಡ್-II (ಹಿರಿಯ) ಹುದ್ದೆಗೆ ಆಯ್ಕೆ ಆದವರಿಗೆ ಮಾಸಿಕ 78,800 ರೂಪಾಯಿ ಆರಂಭಿಕ ವೇತನ ಸಿಗಲಿದೆ. ಜತೆಗೆ ಸರ್ಕಾರಿ ಭತ್ಯೆ ಇತರ ಸೌಲಭ್ಯಗಳು ಸಿಗಲಿವೆ.
ಹಾಗೆಯೇ, ಸ್ಪೆಷಲಿಸ್ಟ್ ಗ್ರೇಡ್-II (ಕಿರಿಯ) ಹುದ್ದೆಗೆ ಆಯ್ಕೆ ಆದವರಿಗೆ 67,700 ರೂಪಾಯಿ ಆರಂಭಿಕ ವೇತನ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರದಿಂದ ಸಿಗುವ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ಎನ್ ಪಿಎ ಹಾಗೂ ಸಾರಿಗೆ ಭತ್ಯೆ ಸೇರಿ ಹೆಚ್ಚುವರಿ ಸೌಲಭ್ಯಗಳು ಸಿಗಲಿವೆ ಎಂದು ಇಎಸ್ಐಸಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವವರು ಆಯಾ ಪ್ರಾದೇಶಿಕ ಇಎಸ್ಐಸಿಗಳಿಗೆ ದಾಖಲೆಗಳ ಸಮೇತ ನೀಡಬೇಕು ಎಂದು ತಿಳಿಸಲಾಗಿದೆ.
ಅರ್ಜಿ ಕಳುಹಿಸುವಾಗ ಅಭ್ಯರ್ಥಿಗಳು ಲಕೋಟೆಯ ಮೇಲೆ ಸ್ಪಷ್ಟವಾಗಿ “Application for the post of Specialist Gr.-II (Jr./Sr. Scale) for _ region, Specialty applied for: _” ಎಂದು ಬರೆದಿರಬೇಕು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕವಿದೆ. ಎಸ್ಸಿ, ಎಸ್ಟಿ, ಮಾಜಿ ಸೈನಿಕರಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.