ವಿಜಯಪುರ: ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ತೊಡೆ ತಟ್ಟಿ ನಿಂತಿದ್ದಾರೆ. ಈಗ ಮತ್ತೊಂದು ಸಂಘಟನೆಯ ಮೂಲಕ ಟಾಂಗ್ ಕೊಡಲು ಸಿದ್ಧರಾಗಿದ್ದಾರೆ.
ಈ ಕುರಿತು ವಿಜಯಪುರದಲ್ಲಿ ಸಭೆ ಸೇರಿ ಹಿಂದುತ್ವದ ಹೆಸರಿನಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸಂಘಟನೆ ಮಾಡುವುದಾಗಿ ಘೋಷಿದ್ದಾರೆ. ವಿಜಯಪುರ ತಾಲೂಕಿನ ಮಹಲ್ ಐನಾಪುರ ಗ್ರಾಮದಲ್ಲಿರುವ ಹುಲಜಂತಿ ಮಠದ ಆವರಣದಲ್ಲಿ ಮಠಾಧೀಶರು, ಬೆಂಬಲಿಗರೊಂದಿಗೆ ಸಭೆ ನಡೆಸಿದ್ದಾರೆ.
ಈಗಾಗಲೇ ಬಿಜೆಪಿಯಿಂದ ದೂರ ಸರಿದಿರುವ ಈಶ್ವರಪ್ಪ, ರಾಜಕೀಯ ಭವಿಷ್ಯದ ದೃಷ್ಟಿಯಿಂದ ಹಾಗೂ ಯಡಿಯೂರಪ್ಪ ಕುಟುಂಬ ರಾಜಕಾರಣ ವಿರೋಧಿಸುವವರನ್ನು ಒಂದೆಡೆ ಸೇರಿಸುವ ಉದ್ದೇಶ ಹೊಂದಿದ್ದಾರೆ. ಈ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ರಾಯಣ್ಣ ಬ್ರಿಗೇಡ್ ಮಾದರಿಯಲ್ಲಿ ರಾಯಣ್ಣ ಚೆನ್ನಮ್ಮ ಬ್ರಿಗೇಡ್ ಸ್ಥಾಪನೆ ಮಾಡಲು ಮುಂದಾಗಲಾಗಿದೆ. ಎಲ್ಲಾ ಸ್ವಾಮೀಜಿಗಳ ಜಗದ್ಗುರುಗಳ ಬೆಂಬಲ ಸಿಕ್ಕಿದೆ. ಅ.ಕ್ಟೋಬರ್ 20 ರಂದು ಬಾಗಲಕೋಟೆಯಲ್ಲಿ ಸಭೆ ನಡೆಸುವುದಾಗಿ ಹೇಳಿದ್ದಾರೆ.
ಹಿಂದೆ ರಾಯಣ್ಣ ಬ್ರಿಗೇಡ್ ಮಾಡಿದಾಗ ಏನೆಲ್ಲಾ ಆಯಿತು ಎಂಬುವುದು ಎಲ್ಲರಿಗೂ ಗೊತ್ತಿದೆ. ಈಗ ಮುಂದೆ ಇಡುವ ಈ ಹೆಜ್ಜೆ ಹಿಂದೆ ಇಡಲ್ಲ. ಬಾಗಲಕೋಟೆಯಲ್ಲಿ ನಡೆಯೋ ಸಭೆಗೆ ಧೈರ್ಯವಿದ್ದವರು, ಗಟ್ಟಿಯಿದ್ದವರು ಮಾತ್ರ ಬನ್ನಿ ಎಂದು ಹೇಳಿದ್ದಾರೆ.
ಈ ಬ್ರಿಗೇಡ್ ಗೆ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಪಕ್ಷ ಸಂಬಂಧವಿಲ್ಲ. ಎಲ್ಲಾ ಸಮಾಜದವರೂ ಸಭೆಗೆ ಬರಬಹುದು ಎಂದು ಹೇಳಿದ್ದಾರೆ. ಸಭೆಯಲ್ಲಿ ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ದಾವಣಗೆರೆಯಿಂದ ಬೆಂಬಲಿಗರು ಆಗಮಿಸಿದ್ದರು.
ಸಮಾಜದಲ್ಲಿನ ಶೋಷಿತರು, ಬಡವರಿಗಾಗಿ ಈ ಬ್ರಿಗೇಡ್ ಹೋರಾಟ ಮಾಡಲಿದೆ ಎಂದು ಈಶ್ವರಪ್ಪ ಹೇಳಿದ್ದಾರೆ. ಈ ವೇಳೆ ಹುಲಜಂತಿ ಮಹಾರಾಜರು, ಮಖಣಾಪುರ ಸ್ವಾಮೀಜಿ, ಕೆ ಕಾಂತೇಶ್ ರಾಜು ಬಿರಾದಾರ ಸೇರಿದಂತೆ ಹಲವರು ಇದ್ದರು.