ಬೆಂಗಳೂರು: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು (ಇಪಿಎಫ್ಒ) ಮಹತ್ವದ ಡಿಜಿಟಲ್ ಸುಧಾರಣೆಗಳನ್ನು ಜಾರಿಗೆ ತರುತ್ತದೆ. ಅದರಲ್ಲೂ, ಇಪಿಎಫ್ಒ ಸದಸ್ಯರು ಸುಲಭವಾಗಿ ಪಿಎಫ್ ಹಣ ಕ್ಲೇಮ್ ಮಾಡುವುದು, ಖಾತೆಗಳ ಹಣದ ವರ್ಗಾವಣೆ ಸೇರಿ ಹಲವು ಸುಧಾರಣೆ ಜಾರಿಗೆ ತರುತ್ತಿದೆ. ಅದರಲ್ಲೂ, ಎಟಿಎಂಗಳ ಮೂಲಕವೇ ಪಿಎಫ್ ಹಣ ವಿತ್ ಡ್ರಾ ಮಾಡುವ ವ್ಯವಸ್ಥೆ ಬಗ್ಗೆ ನಿರೀಕ್ಷೆ ಹುಟ್ಟಿವೆ. ಇದರ ಬೆನ್ನಲ್ಲೇ, ಈ ಯೋಜನೆಯು 2026ರ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ತಿಳಿದುಬಂದಿದೆ.
ಹೌದು, ಎಟಿಎಂಗಳ ಮೂಲಕ ಹಣ ವಿತ್ ಡ್ರಾ ಮಾಡುವುದು ಸೇರಿ ಹಲವು ಸೌಲಭ್ಯಗಳು ಇರುವ, ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆಯುವ ಇಪಿಎಫ್ಒ 3.0 ವ್ಯವಸ್ಥೆಯನ್ನು ಮುಂದಿನ ಜನವರಿಯಲ್ಲಿ ಜಾರಿಗೆ ತರಲಾಗುತ್ತದೆ ಎಂಧು ಉನ್ನತ ಮೂಲಗಳು ತಿಳಿಸಿವೆ. ಇಪಿಎಫ್ಒ ಸೌಲಭ್ಯಗಳು ಸುಲಭವಾಗಿ ಜನರಿಗೆ ಸಿಗಬೇಕು ಎಂದು ಇಪಿಎಫ್ಒ 3.0 ಜಾರಿಗೆ ತರಲಾಗುತ್ತಿದೆ.
ಈಗಾಗಲೇ ಇಪಿಎಫ್ಒ 3.0 ಯೋಜನೆ ಜಾರಿಗಾಗಿ ಇನ್ಫೋಸಿಸ್ ಸೇರಿ ಹಲವು ಟೆಕ್ ಕಂಪನಿಗಳಿಗೆ ಕೇಂದ್ರ ಸರ್ಕಾರವು ಮಹತ್ವದ ಜವಾಬ್ದಾರಿ ನೀಡಿದೆ. ಐಟಿ ಸುಧಾರಣೆಗಾಗಿ ಹೊಣೆಗಾರಿಕೆ ನೀಡಲಾಗಿದೆ. ಮತ್ತೊಂದೆಡೆ, ದೇಶದ ಆರ್ ಬಿ ಐ ಸೇರಿ ಎಲ್ಲ ಬ್ಯಾಂಕುಗಳಿಗೆ ಯೋಜನೆ ಜಾರಿಗಾಗಿ ಸಿದ್ಧವಿರಿ ಎಂಬುದಾಗಿಯೂ ಕೇಂದ್ರ ಸರ್ಕಾರ ಸೂಚಿಸಿದೆ ಎನ್ನಲಾಗಿದೆ.
ಇಪಿಎಫ್ಒಗೆ ಒಟ್ಟು 7.8 ಕೋಟಿ ಸದಸ್ಯರು ಇದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಿಎಫ್ ಮೊತ್ತದ ವಿತ್ ಡ್ರಾ ಮಿತಿಯನ್ನು ಇಪಿಎಫ್ಒ 1 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇಪಿಎಫ್ಒ 3.0 ಡಿಜಿಟಲ್ ವ್ಯವಸ್ಥೆಯಲ್ಲಿ ಕೆಲವೇ ದಿನಗಳಲ್ಲಿ ಪಿಎಫ್ ಕ್ಲೇಮ್ ಗೆ ಅನುಮೋದನೆ ನೀಡುವುದು, ವಿತ್ ಡ್ರಾ ಮಾಡುವುದು ಸೇರಿ ಹಲವು ಸೌಲಭ್ಯಗಳು ಇರುತ್ತವೆ ಎಂದು ತಿಳಿದುಬಂದಿದೆ.