ಬೆಂಗಳೂರು : ಮಲ್ಲೇಶ್ವರಂನ ಮಾರುತಿ ಬಡಾವಣೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚುತ್ತಿದೆ. ಈ ಹಿನ್ನಲೆ ಹೆಚ್ಚುವರಿ ತರಗತಿ ಕೊಠಡಿಗಳ ಅಗತ್ಯವಾಗಿತ್ತು. ಪ್ರಸ್ತುತ ಇರುವ ಶಾಲಾ ಕಟ್ಟಡ ಹಳೆಯದಾಗಿರುವುದರಿಂದ ಅದರ ಮೇಲೆ ಹೆಚ್ಚುವರಿ ಮಹಡಿ ನಿರ್ಮಾಣ ಮಾಡುವುದು ಸಾಧ್ಯವಿಲ್ಲವೆಂದು ತಿಳಿದುಬಂದಿದೆ.

ಹೀಗಾಗಿ, ಶಾಲೆ ಮತ್ತು ಶಿಶುವಿಹಾರ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್‌ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇಂದು ಶಾಸಕ ಸಿ.ಎನ್.ಅಶ್ವಥ್ ನಾರಾಯಣ್, ಹೊಸ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಒಟ್ಟು 11.60 ಕೋಟಿ ವೆಚ್ಚದಲ್ಲಿ ಶಾಲೆ ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗೆ ಶಾಸಕರ ಕ್ಷೇತ್ರ ಅಭಿವೃದ್ಧಿ ನಿಧಿ ಹಾಗೂ ಸಂಸದರ ಕ್ಷೇತ್ರ ಅಭಿವೃದ್ಧಿ ನಿಧಿ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ.
ಹೊಸ ಕಟ್ಟಡದ ವೈಶಿಷ್ಟ್ಯಗಳು
- ತಳಹಾಸು (ಗ್ರೌಂಡ್ ಫ್ಲೋರ್) ಸಂಪೂರ್ಣವಾಗಿ ಮಕ್ಕಳ ಆಟದ ಮೈದಾನವಾಗಿ ವಿನ್ಯಾಸಗೊಳಿಸಲಾಗುತ್ತದೆ.
- ಸುಮಾರು 31 ಸಾವಿರ ಚದರ ಅಡಿ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣವಾಗಲಿದೆ.
- ಒಟ್ಟು 21 ಸುಸಜ್ಜಿತ ಕೊಠಡಿಗಳು ನಿರ್ಮಾಣಗೊಳ್ಳಲಿವೆ.
- ಅದರಲ್ಲಿ 19 ಕೊಠಡಿಗಳು ಶಾಲೆ ಹಾಗೂ ಶಿಶುವಿಹಾರ ಬಳಕೆಗಾಗಿ ಮೀಸಲಾಗಿರುತ್ತವೆ.
- ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಗ್ರಂಥಾಲಯ (ಲೈಬ್ರರಿ) ಹಾಗೂ ಜಿಮ್ (ಜಿಮ್ನೇಶಿಯಂ) ವ್ಯವಸ್ಥೆ ಕಲ್ಪಿಸಲಾಗುತ್ತದೆ.



















