ಒಲಿಂಪಿಕ್ಸ್ ನಲ್ಲಿ 2028ರಿಂದ ಕ್ರಿಕೆಟ್ ಕೂಡ ಒಂದು ಕ್ರೀಡೆಯಾಗಿ ಆಯ್ಕೆಯಾಗಿದೆ. 2028ರಲ್ಲಿ ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಕ್ರಿಕೆಟ್ ಹೊಸದಾಗಿ ಪಾದಾರ್ಪಣೆ ಮಾಡಲಿದೆ. 2028ರಲ್ಲಿ ನಡೆಯಲಿರುವ ವಿಶ್ವ ಕ್ರೀಡಾಕೂಟದಲ್ಲಿ 8 ತಂಡಗಳು ಕಣಕ್ಕೆ ಇಳಿಯಲಿವೆ.
ಒಂದು ವೇಳೆ ಇಂಗ್ಲೆಂಡ್ 6 ತಂಡಗಳ ಪೈಕಿ ಸ್ಥಾನ ಪಡೆದರೆ, ಇಂಗ್ಲೆಂಡ್-ಸ್ಕಾಟ್ಲೆಂಡ್ ಒಂದೇ ತಂಡವಾಗಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಕಾರಣ ಇಂಗ್ಲೆಂಡ್-ಸ್ಕಾಟ್ಲೆಂಡ್ ದೇಶಗಳು ಒಲಿಂಪಿಕ್ಸ್ ನಲ್ಲಿ ಗ್ರೇಟ್ ಬ್ರಿಟನ್ ಹೆಸರಿನಲ್ಲಿ ಕಣಕ್ಕಿಳಿಯುತ್ತವೆ. ಹೀಗಾಗಿ ಈಗ ಕ್ರಿಕೆಟ್ ಸೇರ್ಪಡೆಯಿಂದಾಗಿ ಎರಡೂ ದೇಶಗಳು ಒಂದೇ ತಂಡವಾಗಿ ಕಣಕ್ಕೆ ಇಳಿಯಬೇಕಾದ ಅನಿವಾರ್ಯತೆ ಇದೆ.
ಕೇವಲ ಪುರುಷರ ಕ್ರಿಕೆಟ್ ತಂಡಕ್ಕೆ ಮಾತ್ರ ಇದು ಸೀಮಿತವಾಗಿಲ್ಲ. ಈ ಕ್ರಮವು ಮಹಿಳಾ ಕ್ರಿಕೆಟ್ ತಂಡಕ್ಕೂ ಅನ್ವಯಿಸುತ್ತದೆ. ಇಸಿಬಿ ಮತ್ತು ಕ್ರಿಕೆಟ್ ಸ್ಕಾಟ್ಲೆಂಡ್ ಸಂಸ್ಥೆಗಳು ಈ ವಿಷಯದ ಕುರಿತು ತಮ್ಮ ಪ್ರಾಥಮಿಕ ಮಾತುಕತೆಗಳನ್ನು ಪ್ರಾರಂಭಿಸಿವೆ. ಆಟಗಾರರು ಮಾತ್ರವಲ್ಲದೆ, ಸಹಾಯಕ ಸಿಬ್ಬಂದಿ ಆಯ್ಕೆ ಕೂಡ ಇಲ್ಲಿ ಅಷ್ಟೇ ಮಹತ್ವ ಪಡೆಯುತ್ತದೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್ ನಾಲ್ಕು ವರ್ಷ ಮುಂದೆ ಇದೆ. ಆದರೆ ನಾವು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಕ್ರಿಕೆಟ್ ಸ್ಕಾಟ್ಲೆಂಡ್‌ನೊಂದಿಗೆ ಮಾತನಾಡುತ್ತಿದ್ದೇವೆ ಎಂದು ಇಸಿಬಿ ವಕ್ತಾರರು ಇಎಸ್ ಪಿಎನ್ ಕ್ರಿಕ್ ಇನ್ ಫೋಗೆ ಹೇಳಿದ್ದಾರೆ.
2026 ಮತ್ತು 2030 ರಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ಐಸಿಸಿ ಟಿ20 ವಿಶ್ವಕಪ್ ಆತಿಥ್ಯ ವಹಿಸಿಕೊಳ್ಳಲಿರುವ ಇಂಗ್ಲೆಂಡ್ ಗೆ ಇದು ಮುಖ್ಯ ವಿಷಯವಾಗಿದೆ.