ನವದೆಹಲಿ: ಭಾರತದೊಂದಿಷ್ಟು ಸ್ಟಾರ್ಟ್‌ಅಪ್ ಸಂಸ್ಥೆಯಲ್ಲಿ ಸಾಂಪ್ರದಾಯಿಕ ಉಡುಗೆ ನಿಯಮವನ್ನು ಬಲವಂತವಾಗಿ ಜಾರಿಗೆ ತರಲಾಗಿದ್ದು, ಅದನ್ನು ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತಿದೆ ಎಂಬ ಆಕ್ಷೇಪ ಹೊರಬಿದ್ದಿದೆ. ಕಂಪನಿಯ ಈ ನೀತಿಯನ್ನು ಉದ್ಯೋಗಿಯೊಬ್ಬರು ಸಾಮಾಜಿಕ ತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡು ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ರೆಡ್ಡಿಟ್‌ನ r/IndianWorkplace ಚಾನೆಲ್‌ನಲ್ಲಿ ಪ್ರಕಟವಾದ ಪೋಸ್ಟ್‌ನಲ್ಲಿ, ಮಹಿಳಾ ಉದ್ಯೋಗಿಯೊಬ್ಬರು ತಮ್ಮ ಕಂಪನಿಯ ಎಚ್ಆರ್ ವಿಭಾಗ ಕಳುಹಿಸಿದ ಅಧಿಕೃತ ಇಮೇಲ್ ಅನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ಪ್ರತಿ ಶುಕ್ರವಾರ “ಟ್ರೆಡಿಷನಲ್ ಫ್ರೈಡೇ”(ಸಾಂಪ್ರದಾಯಿಕ ಶುಕ್ರವಾರ) ಆಚರಿಸುವ ನೀತಿ ಘೋಷಿಸಲಾಯಿತು. ಆ ದಿನ ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸದ ಉದ್ಯೋಗಿಯು 100 ರೂ. ದಂಡ ಪಾವತಿಸಬೇಕೆಂದು, ಹಿರಿಯ ಮ್ಯಾನೇಜರ್ ಹುದ್ದೆಯಲ್ಲಿರುವವರಿಗೆ ಈ ಮೊತ್ತ 500 ರೂ. ಆಗಿರುತ್ತದೆ ಎಂದು ಹೇಳಲಾಗಿದೆ.

ಕಂಪನಿಯು ಈ ಹಣವನ್ನು ಸಿಎಸ್ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿರುವುದಾಗಿ ಇಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ನಿಯಮದ ಉದ್ದೇಶ “ಸಾಂಸ್ಕೃತಿಕ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಕಚೇರಿಯಲ್ಲಿ ಹಬ್ಬದ ವಾತಾವರಣ ಉಂಟುಮಾಡುವುದು” ಎಂದು ಎಚ್ಆರ್ ವಿಭಾಗ ವಿವರಿಸಿದೆ.
ಆದರೆ ಈ ನೀತಿ ಸರಿಯಲ್ಲ ಎಂದು ಕೆಲವು ಉದ್ಯೋಗಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ. ಕಂಪನಿಯು ಮೊದಲು “ಕ್ಯಾಷುವಲ್ ಫ್ರೈಡೆ” ಪ್ರಕ್ರಿಯೆ ಅನುಸರಿಸುತ್ತಿತ್ತು, ಆದರೆ ಅರ್ಧ ವರ್ಷಗಳ ಬಳಿಕ ಅದನ್ನು ಸಾಂಪ್ರದಾಯಿಕ ಅಥವಾ ಅಧಿಕೃತ ಉಡುಪುಗಳ ನೀತಿಗೆ ಬದಲಾಯಿಸಿತು. “ನಾನು ಸಾಮಾನ್ಯವಾಗಿ ಆಫೀಸ್ ಫಾರ್ಮಲ್ಸ್ ಧರಿಸುತ್ತೇನೆ. ಹೀಗಾಗಿ ಹೊಸದಾಗಿ ಸಾಂಪ್ರದಾಯಿಕ ಉಡುಪು ಖರೀದಿಸುವುದೂ ಅನಗತ್ಯ ಖರ್ಚು. ಇಂದು ಈ ಇಮೇಲ್ ನೋಡಿದಾಗ ತಾಳ್ಮೆ ಕಳಕೊಂಡೆ,” ಎಂದು ಮಹಿಳಾ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ನಿಯಮ ಕಾನೂನಾತ್ಮಕವೇ?: ನೆಟ್ಟಿಗರ ಪ್ರಶ್ನೆಗಳು
ಈ ಪೋಸ್ಟ್ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕಂಪನಿಯ ನೀತಿಯನ್ನು ಕಠಿಣವಾಗಿ ಟೀಕಿಸಿದ್ದಾರೆ. ಬಳಕೆದಾರರೊಬ್ಬರು—ತಾವು ವಕೀಲರು ಎಂಬುದನ್ನು ಉಲ್ಲೇಖಿಸಿ—“ಉದ್ಯೋಗಿಯ ಉಡುಪು ಆಧಾರದ ಮೇಲೆ ದಂಡ ವಿಧಿಸುವ ಹಕ್ಕು ಕಂಪನಿಗೆ ಇಲ್ಲ. ಸಿಎಸ್ಆರ್ ಕಂಪನಿಯ ಒಂದು ಕಾನೂನಾತ್ಮಕ ಬಾಧ್ಯತೆಯಾಗಿದ್ದು, ಉದ್ಯೋಗಿಗಳ ಬಾಧ್ಯತೆ ಅಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು “ಕೆಲವು ಕಂಪನಿಗಳು ಕೆಲಸವನ್ನು ಸುಲಭಗೊಳಿಸುವ ಬದಲು ಮತ್ತಷ್ಟು ವಿಪರೀತ ನಿಯಮಗಳನ್ನು ಹೇರುತ್ತಿವೆ” ಎಂದು ಕ್ರೋಧ ವ್ಯಕ್ತಪಡಿಸಿದ್ದಾರೆ. ಹಲವರು ಸಾಂಸ್ಕೃತಿಕ ವೈವಿಧ್ಯತೆಯ ಹಿನ್ನಲೆಯಲ್ಲಿ ಈ ರೀತಿಯ ನಿಯಮವು ಎಲ್ಲರಿಗೂ ಅನ್ವಯವಾಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೊಸ ಬೈಯ್ಯಪ್ಪನಹಳ್ಳಿ ಬಡಾವಣೆ ಬಾರ್ ಮುಚ್ಚಿಸುವ ಹೊಣೆ ನಿಮ್ಮದು | ಅಬಕಾರಿ ಉಪ ಆಯುಕ್ತರಿಗೆ ಮಹಿಳಾ ಆಯೋಗ ಲೆಟರ್!



















