ನವದೆಹಲಿ: ಅಕ್ರಮ ಕಲ್ಲಿದ್ದಲು ಗಣಿಗಾರಿಕೆ, ಸಾಗಣೆ ಮತ್ತು ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಂದು ಬೃಹತ್ ಕಾರ್ಯಾಚರಣೆ ನಡೆಸಿದೆ. ಪಶ್ಚಿಮ ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳ ಸುಮಾರು 42 ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಕಲ್ಲಿದ್ದಲು ಮಾಫಿಯಾಕ್ಕೆ ನಡುಕ ಹುಟ್ಟಿಸಿದೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ ದಾಳಿ ರಾಜಕೀಯವಾಗಿಯೂ ಮಹತ್ವ ಪಡೆದುಕೊಂಡಿದೆ.
ಶುಕ್ರವಾರ ಮುಂಜಾನೆ 6 ಗಂಟೆಗೆ ಪ್ರಾರಂಭವಾದ ಈ ಕಾರ್ಯಾಚರಣೆಯಲ್ಲಿ 100ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಕೇಂದ್ರ ಸಶಸ್ತ್ರ ಪಡೆಗಳ ಬಿಗಿ ಭದ್ರತೆಯಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ.
ಪಶ್ಚಿಮ ಬಂಗಾಳ: ಕೋಲ್ಕತ್ತಾ, ದುರ್ಗಾಪುರ, ಪುರುಲಿಯಾ ಮತ್ತು ಹೌರಾ ಜಿಲ್ಲೆಗಳ 24 ಕಡೆಗಳಲ್ಲಿ ಶೋಧ ನಡೆಸಲಾಗಿದೆ. ಇದರಲ್ಲಿ ಮನೆಗಳು, ಕಚೇರಿಗಳು, ಕೋಕ್ ಪ್ಲಾಂಟ್‌ಗಳು ಮತ್ತು ಅಕ್ರಮ ಟೋಲ್ ಬೂತ್‌ಗಳು ಸೇರಿವೆ. ಪ್ರಮುಖವಾಗಿ ಭಾರತ್ ಕೋಕಿಂಗ್ ಕೋಲ್ ಲಿಮಿಟೆಡ್ (BCCL) ಗುತ್ತಿಗೆದಾರರೊಬ್ಬರ ಮನೆ ಮತ್ತು ಕಚೇರಿಯ ಮೇಲೂ ದಾಳಿ ನಡೆದಿದೆ.
ಜಾರ್ಖಂಡ್: ರಾಂಚಿ ವಲಯ ಕಚೇರಿಯ ನೇತೃತ್ವದಲ್ಲಿ ನೆರೆಯ ಜಾರ್ಖಂಡ್ ರಾಜ್ಯದ 18 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಅನಿಲ್ ಗೋಯಲ್, ಸಂಜಯ್ ಉದ್ಯೋಗ್ ಮತ್ತು ಎಲ್.ಬಿ. ಸಿಂಗ್ ಎಂಬುವವರಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ಧನ್‌ಬಾದ್‌ನಲ್ಲಿ ಉದ್ಯಮಿ ಎಲ್.ಬಿ. ಸಿಂಗ್ ಅವರ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದಾಗ ಅಧಿಕಾರಿಗಳ ಮೇಲೆ ಸಾಕು ನಾಯಿಗಳನ್ನು ಛೂಬಿಟ್ಟ ಘಟನೆಯೂ ವರದಿಯಾಗಿದೆ.
ಅಕ್ರಮ ಹಣ ಮತ್ತು ಚಿನ್ನಾಭರಣ ಜಪ್ತಿ
ದಾಳಿಯ ವೇಳೆ ಭಾರೀ ಪ್ರಮಾಣದ ಅಕ್ರಮ ಸಂಪತ್ತು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ. ಕೆಲವೆಡೆ ಕಂತೆ ಕಂತೆ ಹಣ ಮತ್ತು ಕೆಜಿಗಟ್ಟಲೆ ಚಿನ್ನಾಭರಣಗಳು ಅಧಿಕಾರಿಗಳ ಕೈಗೆ ಸಿಕ್ಕಿವೆ.
ಪಶ್ಚಿಮ ಬಂಗಾಳದ ಒಂದು ಸ್ಥಳದಲ್ಲಿ ಸೂಟ್‌ಕೇಸ್‌ನಲ್ಲಿ ತುಂಬಿಟ್ಟಿದ್ದ ಅಂದಾಜು 70 ಲಕ್ಷ ರೂ. ಮೌಲ್ಯದ 500 ಮುಖಬೆಲೆಯ ನೋಟುಗಳ ಕಂತೆಗಳು ಪತ್ತೆಯಾಗಿವೆ.ಮತ್ತೊಂದು ಕಡೆ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಸುಮಾರು 30 ಲಕ್ಷ ರೂ. ನಗದು ಸಿಕ್ಕಿದೆ. ಜಾರ್ಖಂಡ್‌ನಲ್ಲೂ 85 ಲಕ್ಷಕ್ಕೂ ಅಧಿಕ ನಗದು ಮತ್ತು ಬೆಲೆಬಾಳುವ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜಕೀಯ ಸಂಘರ್ಷದ ಮುನ್ಸೂಚನೆ
ಈ ದಾಳಿಯು ಪಶ್ಚಿಮ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ. ಕಲ್ಲಿದ್ದಲು ಕಳ್ಳತನದಿಂದ ಬೊಕ್ಕಸಕ್ಕೆ ನೂರಾರು ಕೋಟಿ ನಷ್ಟವಾಗಿದೆ ಎಂದು ಇಡಿ ಆರೋಪಿಸಿದ್ದು, ಇದು ಚುನಾವಣಾ ವಿಷಯವಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಇದನ್ನೂ ಓದಿ: ಗಾಜಾದಲ್ಲಿ ಹಮಾಸ್‌ನ ಬೃಹತ್ ಸುರಂಗ ಪತ್ತೆ : 7 ಕಿ.ಮೀ ಉದ್ದ, 25 ಮೀಟರ್ ಆಳ, 80 ಕೊಠಡಿಗಳು!



















