ಹಾವೇರಿ: ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದ್ದು, ಹಣ – ಹೆಂಡದ್ದೇ ಕಾರುಬಾರು ಎನ್ನಲಾಗಿದೆ. ಮೂರು ಕ್ಷೇತ್ರಗಳು ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ಭಾರೀ ಮದ್ಯ ಮಾರಾಟವಾಗಿದೆ. ಶಿಗ್ಗಾಂವಿಯಲ್ಲಿ 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ ಎನ್ನಲಾಗಿದೆ.
ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ. 13ರವರೆಗಿನ ಅಂಕಿ-ಅಂಶಗಳಂತೆ, 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ. ಎರಡೂ ತಾಲ್ಲೂಕಿನಲ್ಲಿರುವ ಮದ್ಯದ ಅಂಗಡಿ, ಬಾರ್ ಗಳು ಹಾಗೂ ಇತರೆಡೆಗಳಲ್ಲಿ ಮದ್ಯ ಮಾರಾಟ ಜೋರಾಗಿ ನಡೆದಿದೆ.
ಕೆಲವರು ಮುಂಗಡವಾಗಿ ಮದ್ಯ ಖರೀದಿಸಿದ್ದರು ಎನ್ನಲಾಗಿದೆ. ಮತದಾನಕ್ಕೂ ಮುನ್ನಾ ದಿನ ಮಂಗಳವಾರ, ಮದ್ಯ ಮಾರಾಟ ಪ್ರಮಾಣ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ‘ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನಲ್ಲಿ ನ.1ರಿಂದ ನ.13ರ ವರೆಗಿನ ಅವಧಿಯಲ್ಲಿ 11,737 ಮದ್ಯದ ಬಾಕ್ಸ್‌ಗಳು ಮಾರಾಟವಾಗಿವೆ. 11,737 ಬಾಕ್ಸ್‌ಗಳ ಲೆಕ್ಕದಲ್ಲಿ 1.01 ಲಕ್ಷ ಲೀಟರ್ ಮದ್ಯ ಮಾರಾಟವಾಗಿದೆ’ ಎಂದು ಅಬಕಾರಿ ಇಲಾಖೆಯ ಮೂಲಗಳು ಹೇಳಿವೆ.
ಶಿಗ್ಗಾಂವಿ ಕ್ಷೇತ್ರ ಹೊರತು ಪಡಿಸಿದಂತೆ ಪಕ್ಕದ ತಾಲೂಕಾಗಿರುವ ಹಾನಗಲ್ ನಲ್ಲಿ 9,691 ಬಾಕ್ಸ್ ಮದ್ಯ ಮಾರಾಟವಾಗಿದೆ. ಹಾವೇರಿ ತಾಲ್ಲೂಕಿನಲ್ಲಿ 13,261 ಬಾಕ್ಸ್ ಮದ್ಯ ಮಾರಾಟವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟಾರೆ 5.19 ಲಕ್ಷ ಲೀಟರ್ (60,101 ಬಾಕ್ಸ್) ಮದ್ಯ ಮಾರಾಟವಾಗಿದೆ ಎನ್ನಲಾಗಿದೆ.
ಅಲ್ಲದೇ, ಕ್ಷೇತ್ರದ ತುಂಬ ಇರುವ ಹಲವಾರು ಹೋಟೆಲ್ ಗಳಲ್ಲಿ ಹಾಗೂ ದಾಭಾಗಳಲ್ಲಿ ಭರ್ಜರಿ ವ್ಯಾಪಾರ ಕೂಡ ನಡೆದಿದೆ ಎನ್ನಲಾಗಿದೆ. ಈ ಬಾರಿ ಹಣ – ಹೆಂಡ ನದಿಯಂತೆ ಹರಿದಿದೆ ಎಂದು ಮತದಾರರೇ ಮಾತನಾಡಿಕೊಳ್ಳುತ್ತಿದ್ದಾರೆ.