ಬಾಗಲಕೋಟೆ: ಪುರಸಭೆ ಚುನಾವಣೆ ಸಂದರ್ಭದಲ್ಲಿ ಲಾಂಗು-ಮಚ್ಚಿನ ಸದ್ದಾಗಿರುವ ಆತಂಕದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬಾದಾಮಿ ಕ್ಷೇತ್ರದ ಗುಳೇದಗುಡ್ಡ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಲಾಂಗು, ಮಚ್ಚು, ಕಟ್ಟಿಗೆ, ದೊಣ್ಣೆ, ಕಲ್ಲು ಸಮೇತ ಕಿಡಿಗೇಡಿಗಳು ಪುರಸಭೆ ಬಳಿ ಬಂದಿದ್ದರು ಎನ್ನಲಾಗಿದೆ. ಆದರೆ, ಪೊಲೀಸರ ಮುನ್ನೆಚ್ಚರಿಕೆಯಿಂದಾಗಿ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಗುಳೇದಗುಡ್ಡ ಪಟ್ಟಣ ಪಂಚಾಯ್ತಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಆಪ್ತ ಹಾಗೂ ಬಾದಾಮಿ ಶಾಸಕರ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಎರಡು ಬಣಗಳ ಬಡಿದಾಟದಲ್ಲಿ ಅಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿತ್ತು. ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿತ್ತು.
ಸಿದ್ದರಾಮಯ್ಯ ಆಪ್ತ ಹೊಳಬಸು ಶೆಟ್ಟರ್ ಹಾಗೂ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಕಾಂಗ್ರೆಸ್ ಎರಡು ಬಣದಿಂದ ತಲಾ ಒಬ್ಬೊಬ್ಬರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನ ಇಬ್ಬರ ನಾಮಪತ್ರ ತಿರಸ್ಕೃತಗೊಂಡು ಅವಿರೋಧವಾಗಿ ಜೆಡಿಎಸ್ ಆಯ್ಕೆ ಆಗಿತ್ತು. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರೇ ಲಾಂಗು, ಮಚ್ಚು ತುಂಬಿಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ, ಇವರೆಲ್ಲ ಯಾರ ಗುಂಪಿನವರು ಎಂಬುವುದನ್ನು ಮಾತ್ರ ಪೊಲೀಸರು ಬಾಯಿ ಬಿಟ್ಟಿಲ್ಲ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಲ್ಲದೇ, ಇನ್ನೂ ನಾಲ್ವರಿಗಾಗಿ ಬಲೆ ಬೀಸಿದ್ದಾರೆ. ಈ ಕುರಿತು ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವು ಕೊಡಬಾಗಿ, ಇಮಾಮ್ ಕಲಾಶಿ, ವಿಶ್ವನಾಥ ಅಂಬಿಗೇರ್, ಮೊಹಮ್ಮದ್ ಅಲಿ ಮಂಟೂರ್ ಬಂಧಿತರು. ಸಮೀರ್ ಮುಲ್ಲಾ, ವಿಲಾಸ್ ರಾಠೋಡ, ಇಮ್ರಾನ್ ಗಾಡಿ, ಸಮೀರ್ ಚಿಮ್ಮಲಗಿ ಎಂಬುವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.