ನವದೆಹಲಿ: ಜಾಗತಿಕ ಸೂಪರ್‌ಬೈಕ್ ಮಾರುಕಟ್ಟೆಯ ದೈತ್ಯ ಡುಕಾಟಿ (Ducati), ತನ್ನ ಅತ್ಯಂತ ಶಕ್ತಿಶಾಲಿ ಮತ್ತು ರೇಸ್ ಟ್ರ್ಯಾಕ್ ಕೇಂದ್ರಿತ ಮೋಟಾರ್‌ಸೈಕಲ್ ‘ಪಾನಿಗೇಲ್ V4 R‘ (Panigale V4 R) ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ವಿಶ್ವ ಸೂಪರ್‌ಬೈಕ್ ಚಾಂಪಿಯನ್‌ಶಿಪ್ (WSBK) ನಿಯಮಾವಳಿಗಳಿಗೆ ಅನುಗುಣವಾಗಿ ಸಿದ್ಧಪಡಿಸಲಾದ ಈ ಬೈಕ್‌ನ ಎಕ್ಸ್ ಶೋರೂಮ್ ಬೆಲೆ 84.99 ಲಕ್ಷ ರೂಪಾಯಿ ಎಂದು ಘೋಷಿಸಲಾಗಿದೆ.
ಈ ಬೈಕ್ ಕೇವಲ ವೇಗಕ್ಕೆ ಮಾತ್ರವಲ್ಲ, ತಾಂತ್ರಿಕ ಉತ್ಕೃಷ್ಟತೆಗೂ ಹೆಸರಾಗಿದೆ. ಮೊಟೊ ಜಿಪಿ ರೇಸ್‌ಗಳಲ್ಲಿ ಬಳಸುವಂತಹ ಏರೋಡೈನಾಮಿಕ್ ಫೀಚರ್‌ಗಳನ್ನು ಮೊದಲ ಬಾರಿಗೆ ಈ ರಸ್ತೆ-ಕಾನೂನುಬದ್ಧ (Road-legal) ಬೈಕ್‌ನಲ್ಲಿ ಅಳವಡಿಸಲಾಗಿದೆ. ಹೈ-ಸ್ಪೀಡ್‌ನಲ್ಲಿ ಬೈಕ್ ಸ್ಥಿರವಾಗಿರಲು ಮತ್ತು ಹೆಚ್ಚಿನ ಗ್ರಿಪ್ ನೀಡಲು ಇದರಲ್ಲಿ ‘ಬೈಪ್ಲೇನ್ ವಿಂಗ್‌ಗಳನ್ನು’ ಅಳವಡಿಸಲಾಗಿದ್ದು, ಇವು ಹಿಂದಿನ ಆವೃತ್ತಿಗಿಂತ ಶೇ. 25ರಷ್ಟು ಹೆಚ್ಚಿನ ಡೌನ್‌ಫೋರ್ಸ್ ನೀಡುತ್ತವೆ.
ಎಂಜಿನ್ ಸಾಮರ್ಥ್ಯ ಮತ್ತು ವೇಗ
ಪಾನಿಗೇಲ್ V4 R ನಲ್ಲಿ 998cc ಸಾಮರ್ಥ್ಯದ ‘ಡೆಸ್ಮೋಸೆಡಿಸಿ ಸ್ಟ್ರಾಡೇಲ್ R’ ಎಂಜಿನ್ ಇದೆ. ಸಾಮಾನ್ಯ ಸ್ಥಿತಿಯಲ್ಲಿ 218 bhp ಪವರ್ ನೀಡುವ ಈ ಎಂಜಿನ್, ರೇಸಿಂಗ್ ಎಕ್ಸಾಸ್ಟ್ ಮತ್ತು ವಿಶೇಷ ಆಯಿಲ್ ಬಳಸಿದಾಗ ಬರೋಬ್ಬರಿ 239 bhp ಪವರ್ ಉತ್ಪಾದಿಸುತ್ತದೆ. ಆರನೇ ಗೇರ್‌ನಲ್ಲಿ ಈ ಬೈಕ್ ಪ್ರತಿ ನಿಮಿಷಕ್ಕೆ 16,500 ಬಾರಿ ಭ್ರಮಿಸುವ (RPM) ಸಾಮರ್ಥ್ಯ ಹೊಂದಿದೆ. ಇದರಲ್ಲಿ ‘ಡುಕಾಟಿ ರೇಸಿಂಗ್ ಗೇರ್‌ಬಾಕ್ಸ್’ (DRG) ಬಳಸಲಾಗಿದ್ದು, ರೇಸ್ ವೇಳೆ ಆಕಸ್ಮಿಕವಾಗಿ ನ್ಯೂಟ್ರಲ್ ಬೀಳದಂತೆ ವಿನ್ಯಾಸಗೊಳಿಸಲಾಗಿದೆ.
ಸ್ಮಾರ್ಟ್ ಫೀಚರ್‌ಗಳು ಮತ್ತು ಸುರಕ್ಷತೆ
ಬೈಕ್‌ನ ನಿಯಂತ್ರಣಕ್ಕಾಗಿ 6.9 ಇಂಚಿನ ಫುಲ್-ಟಿಎಫ್ಟಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, ಇದು ರೈಡರ್‌ಗೆ ಅಗತ್ಯವಿರುವ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ಸುರಕ್ಷತೆಗಾಗಿ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ಸ್ಲೈಡ್ ಕಂಟ್ರೋಲ್ ಮತ್ತು ವೀಲಿ ಕಂಟ್ರೋಲ್‌ಗಳಂತಹ ಅತ್ಯಾಧುನಿಕ ಎಲೆಕ್ಟ್ರಾನಿಕ್ ಫೀಚರ್‌ಗಳಿವೆ. 186.5 ಕೆಜಿ ತೂಕದ ಈ ಬೈಕ್‌ನಲ್ಲಿ ಬ್ರೆಂಬೊ ಹೈಪ್ಯೂರ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ.
ಭಾರತಕ್ಕೆ 2025ರ ಸಾಲಿಗೆ ನಿಗದಿಪಡಿಸಲಾದ ಏಕೈಕ ಪಾನಿಗೇಲ್ V4 R ಬೈಕ್ ಅನ್ನು ಈಗಾಗಲೇ ಚೆನ್ನೈನಲ್ಲಿ ಗ್ರಾಹಕರೊಬ್ಬರಿಗೆ ಹಸ್ತಾಂತರಿಸಲಾಗಿದ್ದು, ಆಸಕ್ತರು ದೇಶದಾದ್ಯಂತ ಇರುವ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಬುಕಿಂಗ್ ಮಾಡಬಹುದಾಗಿದೆ.
ಇದನ್ನೂ ಓದಿ: ಎಸ್‌ಯುವಿ ಸುನಾಮಿಯ ನಡುವೆಯೂ ಮಾರುತಿ ‘ಡಿಜೈರ್’ ಪಾರುಪತ್ಯ | 2025ರ ಮಾರಾಟದಲ್ಲಿ ಹೊಸ ದಾಖಲೆ!



















