ಲಖನೌ: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅತ್ಯಂತ ಗಂಭೀರ ಅಪರಾಧಗಳಲ್ಲಿ ಒಂದಾಗಿದೆ. ಆದರೂ, ಪ್ರತಿದಿನ ಸಾವಿರಾರು ಮಂದಿ ಭಾರತದಲ್ಲಿ ಮದ್ಯಪಾನ ಮಾಡಿದ ಬಳಿಕ ವಾಹನ ಚಲಾಯಿಸುತ್ತಾರೆ ಮತ್ತು ಕೇಸ್ ಹಾಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ಇಂತಹ ಮತ್ತೊಂದು ಘಟನೆ ಸಂಬಂಧಿಸಿದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಆದರೆ ಅಚ್ಚರಿಯ ಸಂಗತಿ ಎಂದರೆ, ಮದ್ಯಪಾನ ಮಾಡಿದ ಚಾಲಕ ತನ್ನ ಹ್ಯುಂಡೈ ಕ್ರೆಟಾ ಕಾರನ್ನು ರೈಲ್ವೆ ಹಳಿಯ ಮೇಲೆ ಓಡಿಸಿದ್ದಾನೆ. ಈ ಅಪಾಯಕರ ಕೃತ್ಯದ ಪರಿಣಾಮವಾಗಿ ಒಂದು ರೈಲು 30 ನಿಮಿಷಗಳ ಕಾಲ ತಡವಾಗಿ ಓಡಿದೆ ಎಂಬುದಾಗಿ (Viral News) ವರದಿಯಾಗಿದೆ.
ಈ ವಿಡಿಯೋ ಯೂಟ್ಯೂಬ್‌ನಲ್ಲಿ ನಿಖಿಲ್ ರಾಣಾ ಚಾನಲ್ ನಲ್ಲ ಹಂಚಿಕೊಳ್ಳಲಾಗಿದೆ. ಈ ಚಿಕ್ಕ ವಿಡಿಯೋದಲ್ಲಿ ರೈಲ್ವೆ ಸಿಬ್ಬಂದಿಯೊಬ್ಬರು ಹಳಿಯ ಮಧ್ಯದಲ್ಲಿ ನಿಂತಿದ್ದ ಬೂದು ಬಣ್ಣದ ಹ್ಯುಂಡೈ ಕ್ರೆಟಾ ಕಾರಿನತ್ತ ನಡೆದು ಹೋಗುತ್ತಿರುವುದನ್ನು ಕಾಣಬಹುದು.
ವೀಡಿಯೋದಲ್ಲಿ, ರೈಲ್ವೆ ಸಿಬ್ಬಂದಿ ವಿಡಿಯೊದಲ್ಲಿ ಈ ರೀತಿ ವಿವರಿಸುತ್ತಾರೆ. ” ರೈಲ್ವೆ ಕ್ರಾಸಿಂಗ್ ಮುಚ್ಚಿದ್ದರೂ ಚಾಲಕ ಅದನ್ನು ಗೇಟ್ಗೆ ಗುದ್ದಿ ನಂತರ ಹಳಿಯಲ್ಲೇ ಕಾರನ್ನು ಚಲಾಯಿಸಿದ್ದಾನೆ.
ವಿಡಿಯೊ ನೋಡಿದರೆ ಕಾರಿನಲ್ಲಿರುವ ಎಲ್ಲ ಜನರು ಮದ್ಯಪಾನ ಮಾಡಿರುವುದು ಸ್ಪಷ್ಟವಾಗಿತ್ತು. ಅವರಲ್ಲಿ ಒಬ್ಬರು, “ನೀವು ರಸ್ತೆಯಲ್ಲಿ ಚಾಲನೆ ಮಾಡುತ್ತಿಲ್ಲ. ನೀವು ರೈಲ್ವೆ ಹಳಿಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿದ್ದೀರಿ,” ಎಂದು ಚಾಲಕನಿಗೆ ಹೇಳುವುದನ್ನು ಕೇಳಿಸಬಹುದು. ಇದಾದ ಬಳಿಕ, ಸ್ಥಳಕ್ಕೆ ಇನ್ನಷ್ಟು ಜನರು ಸೇರಿ, ವಾಹನವನ್ನು ತೆಗೆಯುವಂತೆ ಹೇಳುತ್ತಾರೆ.
ಎಲ್ಲಿ ನಡೆದ ಘಟನೆ?
ವೀಡಿಯೋ ಪ್ರಕಾರ, ಈ ಘಟನೆ ವಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಭಾನ್‌ಪುರ ರೈಲ್ವೆ ಕ್ರಾಸಿಂಗ್‌ನಲ್ಲಿ ನಡೆದಿದೆ. ಈ ಮದ್ಯಪಾನ ಮಾಡಿದ ಚಾಲಕನ ಅತಿರೇಕದ ನಿರ್ಧಾರಗಳ ಕಾರಣ ರೈಲು ನಿಲ್ಲಿಸಬೇಕಾಯಿತು. 30 ನಿಮಿಷಗಳ ಕಾಲ ಅಲ್ಲಿಯೇ ರೈಲು ನಿಂತಿತ್ತು. ನಂತರ, ರೈಲ್ವೆ ಸಿಬ್ಬಂದಿ ಈ ಹ್ಯುಂಡೈ ಕ್ರೆಟಾವನ್ನು ಹಳಿಯಿಂದ ತೆಗೆದಿದ್ದಾರೆ ಎನ್ನಲಾಗಿದೆ.
ಈ ವ್ಯಕ್ತಿಯ ಬಂಧನ?
ಮದ್ಯಪಾನ ಮಾಡಿದ ಚಾಲಕನನ್ನು ಬಂಧಿಸಲಾಗಿದೆ ಎಂಬ ಕುರಿತು ಯಾವುದೇ ಅಧಿಕೃತ ವರದಿ ಲಭ್ಯವಿಲ್ಲ ಆದರೆ, ಬಂಧನ ಖಚಿತ. ಏಕೆಂದರೆ ಮದ್ಯಪಾನ ಮಾಡಿ ಚಾಲನೆ ಮಾಡುವುದು ಗಂಭೀರ ಅಪರಾಧ.
ಇದನ್ನೂ ಓದಿ: ಸೆಂಟ್ರಲ್ ಜೈಲ್ ನ ಮತ್ತಷ್ಟು ಕರ್ಮಕಾಂಡಗಳು ವೈರಲ್
ಮೋಟಾರ್ ವಾಹನ ಕಾಯ್ದೆ, 1988 ಪ್ರಕಾರ, ಈ ಅಪರಾಧಕ್ಕೆ ₹10,000 ದಂಡ ವಿಧಿಸಬಹುದು ಅಥವಾ 6 ತಿಂಗಳು ಜೈಲು ಶಿಕ್ಷೆ ವಿಧಿಸಬಹುದು ಜತೆಗೆ ಚಾಲನಾ ಪರವಾನಗಿ ರದ್ದುಗೊಳ್ಳುವ ಸಾಧ್ಯತೆಯೂ ಇದೆ.
ಇದೇ ಮೊದಲಲ್ಲ
ಇದು ಇದೇ ಮೊದಲು ಸಂಭವಿಸಿದ ಘಟನೆಯಲ್ಲ. ಇತ್ತೀಚೆಗಷ್ಟೆ, ರಾಜಸ್ಥಾನದ ಜೈಪುರದಲ್ಲಿ ಒಬ್ಬ ಮದ್ಯಪಾನ ಮಾಡಿದ ಮಹೀಂದ್ರ ಥಾರ್ ಚಾಲಕ ರೈಲ್ವೆ ಹಳಿಯಲ್ಲೇ ತನ್ನ ಕಾರನ್ನು “ಆಫ್-ರೋಡಿಂಗ್” ಮಾಡಲು ಪ್ರಯತ್ನಿಸಿದ್ದ
ಆತ, ಒಂದು ಗೂಡ್ಸ್ ರೈಲು ಬರುತ್ತಿರುವುದನ್ನು ಗಮನಿಸಿದ ನಂತರ ರಿವರ್ಸ್ ಹಾಕಿ ಸ್ಥಳದಿಂದ ಪರಾರಿಯಾಗುವ ದೃಶ್ಯವೂ ಅದರಲ್ಲಿ ದಾಖಲಾಗಿದೆ. ಈ ಅಪಾಯಕಾರಿ ಘಟನೆಯನ್ನು ಗಮನಿಸಿದ ಲೊಕೋ ಪೈಲಟ್ (ರೈಲು ಚಾಲಕ) ತಕ್ಷಣ ಬ್ರೇಕ್ ಹಾಕಿ ದೊಡ್ಡ ಅಪಘಾತವನ್ನು ತಪ್ಪಿಸಿದ್ದರು.