ಮುಂಬೈ: ಮಹಾರಾಷ್ಟ್ರದ ಪುಣೆಯ ಸ್ವಾರ್ ಗೇಟ್ ಡಿಪೋದಲ್ಲಿ ನಿಂತಿದ್ದ ಬಸ್ ನಲ್ಲಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ದತ್ತಾತ್ರೇಯ ಗಡೆ (37) ಎಂಬುವನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಬೆಳಗಿನ ಜಾವ ಊರಿಗೆ ಹೊರಟಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು, ಮಹಾರಾಷ್ಟ್ರದ ಶಿರೂರಿನಲ್ಲಿ ಬಂಧಿಸಲಾಗಿದೆ ಎಂದು ಶುಕ್ರವಾರ ಬೆಳಗ್ಗೆ ಮಾಹಿತಿ ನೀಡಿದ್ದಾರೆ.
ಡ್ರೋನ್ ಬಳಕೆ
ಅತ್ಯಾಚಾರ ಸಂಭವಿಸುತ್ತಲೇ ಎಚ್ಚೆತ್ತುಕೊಂಡ ಪೊಲೀಸರು ಆರೋಪಿಗಾಗಿ ಕೂಡಲೇ ಕಾರ್ಯಾಚರಣೆ ನಡೆಸಿದ್ದರು. ಈತನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿದ ಪೊಲೀಸರು, ಸತತ ಮೂರು ದಿನ ಕಾರ್ಯಾಚರಣೆ ನಡೆಸಿದರು. ಆರೋಪಿಯನ್ನು ಹಿಡಿಯಲು ಶ್ವಾನದಳದ ಜತೆಗೆ ಡ್ರೋನ್ ಗಳನ್ನೂ ಬಳಸಿದರು. ಇದರಿಂದಾಗಿ ಮೂರು ದಿನಗಳಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ.
ದುರುಳನನ್ನು ಹಿಡಿದಿದ್ದು ಹೇಗೆ?
ಅತ್ಯಾಚಾರದ ಬಳಿಕ ಪರಾರಿಯಾಗಿದ್ದ ದತ್ತಾತ್ರೇಯ, ಗ್ರಾಮದಿಂದ ಗ್ರಾಮಕ್ಕೆ ತೆರಳಿ ಪೊಲೀಸರಿಗೆ ಸವಾಲಾಗಿದ್ದ. ಕೊನೆಗೆ ಶಿರೂರಿನ ಮನೆಯೊಂದಕ್ಕೆ ತೆರಳಿದ್ದ ದುರುಳನು, ಊಟ ಕೊಡಿ ಎಂದು ಅಂಗಲಾಚಿದ್ದಾನೆ. ಆಗ ಅನುಮಾನಗೊಂಡ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ವಾರ್ ಗೇಟ್ ಬಸ್ ಡಿಪೋದಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ದುರುಳನು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದ. ಪೊಲೀಸ್ ಠಾಣೆಯಿಂದ ಕೇವಲ 100 ಮೀಟರ್ ದೂರದಲ್ಲಿ ಅತ್ಯಾಚಾರ ನಡೆದ ಕಾರಣ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಪೊಲೀಸರು ಆರೋಪಿಯ ಪತ್ತೆಗಾಗಿ 13 ತಂಡಗಳನ್ನು ರಚಿಸಿದ್ದರು.