ವಿಜಯಪುರ: ಬಸವನ ಬಾಗೇವಾಡಿಯಲ್ಲಿ ಫೆ. 4ರಂದು ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ ನೀಡಲಾಗುವುದು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರ ಸಮ್ಮುಖದಲ್ಲಿ ವಿಜಯಪುರದ ಮಖಣಾಪುರ ಸೋಮೇಶ್ವರ ಸ್ವಾಮೀಜಿ ಅವರು ಬ್ರಿಗೇಡ್ ಹೆಸರು ಘೋಷಣೆ ಮಾಡಿದರು.
ಈ ವೇಳೆ ಮಾತನಾಡಿದ ಈಶ್ವರಪ್ಪ, ಸೋಮೇಶ್ವರ ಸ್ವಾಮೀಜಿ ಅವರು ಬ್ರಿಗೇಡ್ ನ ಮುಖ್ಯಸ್ಥರಾಗಿರಲಿದ್ದಾರೆ. ಸಕಲ ಹಿಂದೂ ಸಮಾಜವನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ಈ ಬ್ರಿಗೇಡ್ ರಚಿಸಲಾಗುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳನ್ನ ನೇಮಕ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಪದಾಧಿಕಾರಿಗಳ ನೇಮಕದ ವೇಳೆ ನನ್ನ ಪಾತ್ರವನ್ನು ಸ್ವಾಮೀಜಿಗಳು ನಿರ್ಧಾರ ಮಾಡಲಿದ್ದಾರೆ. ಇವತ್ತು ಮಾರ್ಗದರ್ಶಕ ಮಂಡಳಿ ಹಾಗೂ ಬ್ರಿಗೇಡ್ ಹೆಸರು ಮಾತ್ರ ಘೋಷಣೆ ಮಾಡಲಾಗಿದೆ. ಪದಾಧಿಕಾರಿಗಳ ನೇಮಕ ಮಾಡುವಾಗ ನನ್ನನ್ನು ಸೇರಿದಂತೆ ಹಲವರನ್ನು ಸೇರ್ಪಡೆ ಮಾಡಲಾಗುವುದು ಎಂದಿದ್ದಾರೆ.
ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಹಿಂದುಳಿದ ಮಠಾಧಿಪತಿಗಳೆಲ್ಲರೂ ಒಂದಾಗಿದ್ದೇವೆ. ಹಿಂದೂ ಸಮಾಜ ಉಳಿಸಲು ಒಂದು ಬ್ರಿಗೇಡ್ ಅವಶ್ಯಕತೆ ಇತ್ತು. ಹಿಂದುಳಿದ ಸಮುದಾಯದ ಎಲ್ಲ ಮಠಗಳ ಸ್ವಾಮೀಜಿಗಳು ಈ ಬ್ರಿಗೇಡ್ನಲ್ಲಿರುತ್ತೇವೆ ಎಂದಿದ್ದಾರೆ.