ಆನೇಕಲ್ : ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ. ನಾಗಲಕ್ಷ್ಮೀ ಚೌಧರಿ ಅವರು ಇಂದು (ಬುಧವಾರ) ಆನೇಕಲ್ ತಾಲ್ಲೂಕು, ಸರ್ಜಾಪುರ ಹೋಬಳಿ, ರಾಯಸಂದ್ರ ಗ್ರಾಮದ ಸರ್ವೇ ನಂಬರ್ 91ರಲ್ಲಿ ವಾಸವಿರುವ ಕೋಲೆ ಬಸವ ಅಲೆಮಾರಿ ಸಮುದಾಯದವರ ಸ್ಥಳಕ್ಕೆ ಭೇಟಿ ನೀಡಿ, ಅಲೆಮಾರಿ ಸಮುದಾಯದ ಮಹಿಳೆಯರ ಸಮಸ್ಯೆಗಳನ್ನು ಆಲಿಸಿ, ಮಹಿಳೆಯರಿಗೆ ಇರುವ ಭದ್ರತೆ, ಸುರಕ್ಷತೆ ಹಾಗೂ ಇತರ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.
ಅಲೆಮಾರಿ ಸಮುದಾಯದ ಮನೆಗಳಿಗೆ ನೀರಿನ ವ್ಯವಸ್ಥೆ ಇಲ್ಲದಿರುವುದು, ಮಹಿಳೆಯರಿಗೆ ಶೌಚಾಲಯದ ಸಮಸ್ಯೆ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು, ಕಾಲೋನಿಯಲ್ಲಿ ಸ್ವಚ್ಛತೆ ಇಲ್ಲದಿರುವುದು, ವಿಧವೆಯರಿಗೆ ವಿಧವಾ ವೇತನ ಹಾಗೂ ಏಕ ಪೋಷಕರಾಗಿರುವ ಮಹಿಳೆಯರಿಗೆ ಸರ್ಕಾರದ ಸವತ್ತುಗಳು ಸಿಗದೇ ಇರುವುದು, ಮನೆಗಳಿಗೆ ಹಕ್ಕುಪತ್ರ ನೀಡಲು ಜಾಗದ ಸಮಸ್ಯೆ, ಬಹುತೇಕ ಮನೆಗಳಿಗೆ ವಿದ್ಯುತ್ ಇಲ್ಲದಿರುವುದು, ಅಂಗನವಾಡಿ ಇಲ್ಲದೇ ಇರುವುದು, ಶಾಲಾ ಮಕ್ಕಳು ಪ್ರಾರ್ಥನೆ ಸಲ್ಲಿಸಲೂ ಸ್ಥಳವಿಲ್ಲದಿರುವುದು, ಆಸ್ಪತ್ರೆಯಿಲ್ಲದೆ ಸಣ್ಣ ಕಾಯಿಲೆಗಳಿಗೂ 14 ಕಿ. ಮೀ. ಹೋಗಬೇಕಾದ ಅನಿವಾರ್ಯತೆ ಇರುವುದು, ಶಾಲಾ ಮಕ್ಕಳು ಹಾಗೂ ಮಹಿಳೆಯರು ಓಡಾಡಲು ಬಸ್ ವ್ಯವಸ್ಥೆ ಇಲ್ಲದಿರುವುದು ಮುಂತಾದ ಸಮಸ್ಯೆಗಳನ್ನು ಚೌಧರಿ ಅವರು ಪರಿಶೀಲಿಸಿದರು.
ಮುಖ್ಯವಾಗಿ ಅಲೆಮಾರಿ ಸಮುದಾಯದವರಿಗೆ ಸ್ಥಳದ ಸಮಸ್ಯೆಯು ಇದ್ದು, ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಅಲೆಮಾರಿಗಳು ಹಾಗೂ ಪಕ್ಕದ ಗ್ರಾಮಸ್ಥರ ಸಭೆಯನ್ನು ಏರ್ಪಡಿಸಿ ಸೌಹಾರ್ದಯುತವಾಗಿ ಜಾಗದ ಸಮಸ್ಯೆಯನ್ನು ಎರಡು ತಿಂಗಳಲ್ಲಿ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇಲ್ಲಿನ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸಲು ವಿಶೇಷ ಗ್ರಾಮಸಭೆಯನ್ನು ಕರೆಯಲು ಅವರು ತಿಳಿಸಿದರು.
ಈ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಬಗೆಹರಿಸಿ ವರದಿ ಕಳುಹಿಸುವಂತೆ ಹಾಜರಿದ್ದ ಆನೇಕಲ್ ತಾಲ್ಲೂಕಿನ ತಹಸೀಲ್ದಾರ್ ಅವರಿಗೆ ಸೂಚಿಸಿದರು. ಆದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸಿ ವರದಿ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದರು.







