ಬೆಂಗಳೂರು: ಒಂದು ಕುಟುಂಬಕ್ಕೆ ಅಗತ್ಯ ಪಡಿತರ ಪಡೆಯಲು, ಉಚಿತ ಸೌಲಭ್ಯಗಳನ್ನು ಪಡೆಯಲು, ಆಸ್ಪತ್ರೆಗಳಲ್ಲಿ ಕಡಿಮೆ ಬೆಲೆಗೆ ಚಿಕಿತ್ಸೆ ಪಡೆಯಲು ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ನಿರ್ಣಾಯಕವಾಗಿರುತ್ತದೆ. ಹಾಗಾಗಿ, ಇದನ್ನು ತುಂಬ ಜತನದಿಂದ ಇಟ್ಟುಕೊಳ್ಳಬೇಕಾಗುತ್ತದೆ. ಇಷ್ಟಾದರೂ ಕೆಲವೊಮ್ಮೆ ರೇಷನ್ ಕಾರ್ಡ್ ಕಳೆದುಹೋಗುತ್ತದೆ. ಹೀಗೇನಾದರೂ ಕಳೆದು ಹೋದರೆ ಆತಂಕಕ್ಕೀಡಾಗುವ ಬದಲು ಇ-ರೇಷನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. ಇದರ ಮೂಲಕವೇ ಪಡಿತರ ಸೇರಿ ಹಲವ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಹೌದು, ಸರ್ಕಾರವು ಇ-ರೇಷನ್ ಕಾರ್ಡ್ ಸೌಲಭ್ಯವನ್ನು ಪರಿಚಯಿಸಿದೆ. ಇದರಿಂದ ಹಲವು ಅನುಕೂಲಗಳಿವೆ. ಕಾಗದದ ರೇಷನ್ ಕಾರ್ಡ್ ಕಳೆದು ಹೋದರೆ, ನಿಮ್ಮ ರೇಷನ್ ಕಾರ್ಡ್ ನಂಬರ್ ಮೂಲಕವೇ ಡಿಜಿಟಲ್ ರೂಪದ ರೇಷನ್ ಕಾರ್ಡ್ ಅನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳಬಹುದಾಗಿದೆ. ಇದಕ್ಕೆ ಕ್ಯೂಆರ್ ಕೋಡ್ ಕೂಡ ಇರುವುದರಿಂದ ಯಾವುದೇ ಸೌಲಭ್ಯಗಳನ್ನು ನೀಡಲು ಯಾರೂ ನಿರಾಕರಿಸುವಂತಿರುವುದಿಲ್ಲ.
ಇ-ರೇಷನ್ ಕಾರ್ಡ್ ಪಡೆಯೋದು ಹೇಗೆ?
- ರಾಜ್ಯದ ಆಹಾರ & ನಾಗರಿಕ ಸರಬರಾಜು ಇಲಾಖೆಯ ವೆಬ್ ಸೈಟ್ https://ahara.kar.nic.in/ ಗೆ ಭೇಟಿ ನೀಡಬೇಕು
- ಡೌನ್ ಲೋಡ್ ಇ-ರೇಷನ್ ಕಾರ್ಡ್ ಅಥವಾ ‘Print Ration Card’ ಮೇಲೆ ಕ್ಲಿಕ್ ಮಾಡಬೇಕು.
- ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು
- ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ ಬರುವ OTP ನಮೂದಿಸಬೇಕು
- ಬಳಿಕ ಪಿಡಿಎಫ್ ಫಾರ್ಮ್ಯಾಟ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ
ಇದರ ಜತೆಗೆ ಮೊಬೈಲ್ ನಲ್ಲೇ ಪ್ಲೇಸ್ಟೋರ್ ಗೆ ಹೋಗಿ ಮೇರಾ ರೇಷನ್ ಎಂಬ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು. ಇಲ್ಲೂ ಕೂಡ ಮೊಬೈಲ್ ನಂಬರ್ ಅಥವಾ ಆಧಾರ್ ಸಂಖ್ಯೆಯನ್ನು ನಮೂದಿಸಿ, ರೇಷನ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.