ನವ ದೆಹಲಿ : ʼಮತ ಕಳವುʼ ಎನ್ನುವ ಕೆಟ್ಟ ಪದವನ್ನು ಬಳಕೆ ಮಾಡಿ ಸುಳ್ಳು ಸುದ್ದಿ ಹರಡುವ ಬದಲು ಪುರಾವೆ ನೀಡಿ ಎಂದು ಮತದಾರರ ಅಂಕಿಅಂಶಗಳ ಬಗ್ಗೆ ನಿರಂತರವಾಗಿ ಆರೋಪ ಮಾಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರಿಗೆ ಭಾರತೀಯ ಚುನಾವಣಾ ಆಯೋಗ ಹೇಳಿದೆ.
ʼಒಬ್ಬ ವ್ಯಕ್ತಿ ಒಂದು ಮತʼ ಎನ್ನುವ ಕಾನೂನು ಮೊದಲ ಬಾರಿ ಚುನಾವಣೆ ನಡೆದ 1951-1952 ಅವಧಿಯಿಂದಲೇ ಜಾರಿಯಲ್ಲಿದೆ.
ಪುರಾವೆಗಳಿಲ್ಲದೇ ಭಾರತದ ಎಲ್ಲಾ ಮತದಾರರನ್ನು ʼಕಳ್ಳರುʼ ಎಂದು ಬಣ್ಣಿಸುವ ಬದಲು, ಯಾವುದೇ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಎರಡು ಬಾರಿ ಮತ ಚಲಾವಣೆ ಮಾಡುತ್ತಿರುವ ಬಗ್ಗೆ ಯಾರ ಬಳಿಯಾದರೂ ಪುರಾವೆ ಇದ್ದರೆ ಲಿಖಿತ ಪ್ರಮಾಣಪತ್ರವನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ʼಮತ ಕಳ್ಳರುʼ ಎನ್ನುವ ಕೆಟ್ಟ ಪದವನ್ನು ಬಳಸಿ ದೇಶದ ಕೋಟ್ಯಾಂತರ ಮತದಾರರನ್ನು ಕಳ್ಳರು ಎಂದು ನೇರವಾಗಿ ಆರೋಪಿಸಿರುವುದು ಮಾತ್ರವಲ್ಲ, ಲಕ್ಷಾಂತರ ಚುನಾವಣಾ ಸಿಬ್ಬಂದಿಯ ಸಮಗ್ರತೆಯ ಮೇಲಿನ ದಾಳಿಯಾಗಿದೆ ಎಂದು ಆಯೋಗ ರಾಹುಲ್ ವಿರುದ್ಧ ಕಿಡಿ ಕಾರಿದೆ.



















