ರಷ್ಯಾದಲ್ಲಿ ಹೋಗಿ ಮೋದಿ ವಿರೋಧಿಗಳಿಗೆ ಟಾಂಕ್ ಕೊಟ್ಟಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಹತ್ತು ವರ್ಷಗಳ ಆಡಳಿತ ಟ್ರೇಲರ್ ಅಂದಿದ್ದೆ. ಮುಂದಿನ ಹತ್ತು ವರ್ಷಗಳಲ್ಲಿ ನಾವು ಅತ್ಯಂತ ವೇಗವಾಗಿ ಬೆಳೆಯಲಿದ್ದೇವೆ. ಸೆಮಿ ಕಂಡಕ್ಟರ್‌ನಿಂದ ಹಿಡಿದು ಗ್ರೀನ್ ಎನರ್ಜಿ ವರೆಗೂ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ. ವಿಶ್ವದಲ್ಲಿ ಹೊಸ ಅಧ್ಯಾಯ ಬರೆಯಲಿದ್ದೇವೆ ಎಂದು ವಿಶ್ವಾಸದಿಂದ ಹೇಳಬಲ್ಲೆ. ಸವಾಲಿಗೆ ಸವಾಲು ಹಾಕುವುದು ನನ್ನ ಡಿಎನ್‌ಎನಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಷ್ಯಾ (Russia) ಪ್ರವಾಸದಲ್ಲಿರುವ ಮೋದಿ ಮಾಸ್ಕೋದಲ್ಲಿ (Moscow) ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಭಾರತ ಜಾಗತಿಕವಾಗಿ ಮೂರನೇ ದೊಡ್ಡ ಸ್ಟಾರ್ಟ್ ಅಪ್ ಇಕೋ ಸಿಸ್ಟಮ್ ಹೊಂದಿದೆ. 2014ರಲ್ಲಿ ನಾನು ಪ್ರಧಾನಿಯಾಗಿದ್ದಾಗ ಬಹಳ ವಿರಳ ಪ್ರಮಾಣದಲ್ಲಿ ಸ್ಟಾರ್ಟ್ಅಪ್‌ಗಳಿದ್ದವು. ಇಂದು ಲಕ್ಷಾಂತರ ಸ್ಟಾರ್ಟ್ಅಪ್‌ಗಳಿದೆ. ಭಾರತೀಯ ಯುವಕರ ಸಾಮರ್ಥ್ಯ ಕಂಡು ವಿಶ್ವವೂ ಆಕರ್ಷಿತಗೊಂಡಿದೆ ಎಂದರು.

ಈಗ ಬೇರೆ ಬೇರೆ ದೇಶದಲ್ಲಿನ ಜನರು ಭಾರತಕ್ಕೆ ಬಂದು ಬದಲಾವಣೆ ನೋಡುತ್ತಿದ್ದಾರೆ. ಭಾರತ ಜಿ20 ಅಂತಹ ಸಭೆಯನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದೆ. ಭಾರತ ಕಳೆದ ಹತ್ತು ವರ್ಷದಲ್ಲಿ ವಿಮಾನ ನಿಲ್ದಾಣ ಎರಡು ಪಟ್ಟು ಹೆಚ್ಚಿಸಿದೆ. ಹತ್ತು ವರ್ಷಗಳಲ್ಲಿ 40 ಸಾವಿರ ಕಿ.ಮೀಗೂ ಅಧಿಕ ರೈಲ್ವೆಲೈನ್ ವಿದ್ಯುಧೀಕರಣ ಮಾಡಿದೆ. ಈಗ ಭಾರತದ ಶಕ್ತಿ ಎಲ್ಲರಿಗೂ ತಿಳಿಯುತ್ತಿದೆ ಎಂದು ಹೇಳಿದರು.
ಡಿಜಿಟಲ್ ಪೇಮೆಂಟ್‌ನಲ್ಲಿ ಭಾರತ ದೊಡ್ಡ ಶಕ್ತಿಯಾಗಿದೆ. ಎಲ್1 ಪಾಯಿಂಟ್‌ನಿಂದ ಭಾರತ ಸೂರ್ಯನ ಕುರಿತು ಅಧ್ಯಯನ ನಡೆಸುತ್ತಿದೆ. ಭಾರತವು ವಿಶ್ವದ ಅತಿ ಎತ್ತರದ ರೈಲ್ವೆಬ್ರಿಡ್ಜ್ ಹೊಂದಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದೆ. 140 ಕೋಟಿ ಜನರ ಸಾಮರ್ಥ್ಯದ ಮೇಲೆ ಮತ್ತು ಅನಿವಾಸಿ ಭಾರತೀಯರ ಮೇಲೆ ನಂಬಿಕೆ ಇರಿಸಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಕೋವಿಡ್ ಸಂಕಷ್ಟ ಕಾಲದ ಸ್ಥಿತಿ ಹಾಗೂ ಅದರಿಂದ ಹೊರ ಬಂದ ಪರಿಸ್ಥಿತಿಯನ್ನು ಮೋದಿ ಹೇಳಿದ್ದಾರೆ.

ಕ್ರೀಡೆಯಲ್ಲೂ ನಮ್ಮ ಆಟಗಾರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್‌ಗೆ ಅತ್ಯುತ್ತಮ ತಂಡ ಕಳುಹಿಸಲಾಗಿದೆ. ಭಾರತ ಈಗ ಆತ್ಮವಿಶ್ವಾಸದಿಂದ ಮುನ್ನುಗ್ಗುತ್ತಿದೆ. ಜಾಗತಿಕ ಆರ್ಥಿಕ ಬೆಳವಣಿಗೆಯಲ್ಲಿ ಭಾರತದ ಪಾಲು ಶೇ. 15 ರಷ್ಟಿದೆ. ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಳವಾಗಲಿದೆ. ಮುಂದಿನ ಹತ್ತು ವರ್ಷ ಅತ್ಯಂತ ವೇಗವಾಗಿ ಎಲ್ಲಾ ವಲಯದಲ್ಲಿ ನಾವು ಬೆಳೆಯಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಷ್ಯಾ-ಭಾರತದ ನಡುವಿನ ಸಂಬಂಧವನ್ನು ಕಾಪಾಡಲಾಗುತ್ತಿದೆ. ರಷ್ಯಾ ಭಾರತದ ಸುಖ-ದುಃಖದ ಜೊತೆಗಾರ. ಇದನ್ನು ಸ್ನೇಹ ಎನ್ನುತ್ತಾರೆ. ಈ ಸಂಬಂಧ ಪರಸ್ಪರ ಸ್ನೇಹ ಮತ್ತು ಗೌರವದಿಂದ ಬೆಳೆದಿದೆ. ಭಾರತದ ಯಶಸ್ವಿ ಸಂಬಂಧಕ್ಕೆ ಅಧ್ಯಕ್ಷ ಪುಟಿನ್ ಕಾರಣ. ಕಳೆದ ಹತ್ತು ವರ್ಷಗಳಲ್ಲಿ ನಾನು 17 ಬಾರಿ ಭೇಟಿಯಾಗಿದ್ದೇನೆ. ಯುದ್ಧದ ಅವಧಿಯಲ್ಲಿ ನಮ್ಮ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾಗ ಭಾರತಕ್ಕೆ ಪುಟಿನ್ ಸಹಾಯ ಮಾಡಿದರು ಎಂದು ಹೇಳಿದ್ದಾರೆ.