ಕಾನ್ಪುರ : ಸಮಾಜ ಎಷ್ಟೇ ಬೆಳೆದರೂ ವರದಕ್ಷಿಣೆ ಕಿರುಕುಳದ ಪಿಡುಗು ಮಾತ್ರ ನಿಲ್ಲುವ ಲಕ್ಷಣ ಕಾಣಿಸುತ್ತಿಲ್ಲ. ಅನಾರೋಗ್ಯ ಪೀಡಿತ ಪತಿಗೆ ತನ್ನ ಒಂದು ಮೂತ್ರಪಿಂಡವನ್ನು (Kidney) ದಾನ ಮಾಡಬೇಕು ಇಲ್ಲವೇ ತವರು ಮನೆಯಿಂದ 30 ಲಕ್ಷ ರೂಪಾಯಿ ಹಣ ತರಬೇಕು ಎಂದು ಪತಿಯ ಮನೆಯವರು ವಿವಾಹಿತ ಮಹಿಳೆಗೆ ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಈ ಸಂಬಂಧ ಸಂತ್ರಸ್ತ ಮಹಿಳೆ ಕಾನ್ಪುರದ ಚಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಂತ್ರಸ್ತ ಮಹಿಳೆಯು 2023ರ ಜೂನ್ 22ರಂದು ಲಕ್ನೋದ ನಿಶಾಂತ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ ಮಹಿಳೆಯ ಕುಟುಂಬದವರು ಅಪಾರ ಪ್ರಮಾಣದ ಚಿನ್ನಾಭರಣ, 8 ಲಕ್ಷ ರೂಪಾಯಿ ನಗದು ಮತ್ತು ಮಹೀಂದ್ರಾ ಥಾರ್ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಮದುವೆಯ ನಂತರ ಪತಿಯ ಮನೆಯಲ್ಲಿ ಮಹಿಳೆಗೆ ವಿಚಿತ್ರ ಪರಿಸ್ಥಿತಿ ಎದುರಾಗಿತ್ತು. ಪತಿ ನಿಶಾಂತ್ ದೈಹಿಕ ಸಂಬಂಧಕ್ಕೆ ಆಸಕ್ತಿ ತೋರುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಪ್ರತಿದಿನ 10ಕ್ಕೂ ಹೆಚ್ಚು ಮಾತ್ರೆಗಳನ್ನು ಸೇವಿಸುತ್ತಿದ್ದರೂ, ಅದು ಕೇವಲ ರಕ್ತದೊತ್ತಡಕ್ಕೆ (Hypertension) ಎಂದು ಸುಳ್ಳು ಹೇಳಿ ನಂಬಿಸಲಾಗಿತ್ತು.
ರಹಸ್ಯ ಫೈಲ್‌ನಿಂದ ಬಯಲಾದ ಸತ್ಯ
ಪತಿಯ ವರ್ತನೆಯಿಂದ ಅನುಮಾನಗೊಂಡ ಮಹಿಳೆಗೆ 2024ರ ಏಪ್ರಿಲ್‌ನಲ್ಲಿ ಸತ್ಯ ದರ್ಶನವಾಗಿದೆ. ಮನೆಯಲ್ಲಿ ಬಚ್ಚಿಟ್ಟಿದ್ದ ವೈದ್ಯಕೀಯ ದಾಖಲೆಗಳ ಫೈಲ್ ಅನ್ನು ಹುಡುಕಿದಾಗ, ಪತಿ ನಿಶಾಂತ್‌ನ ಎರಡೂ ಕಿಡ್ನಿಗಳು 2022ರಲ್ಲೇ ವಿಫಲವಾಗಿರುವುದು ಮತ್ತು ಆತ ಡಯಾಲಿಸಿಸ್ ಪಡೆಯುತ್ತಿರುವುದು ಗೊತ್ತಾಗಿದೆ. ಅತಿಯಾದ ವ್ಯಸನದಿಂದಾಗಿ ಆತನ ಆರೋಗ್ಯ ಹದಗೆಟ್ಟಿತ್ತು ಎಂಬ ಕಹಿ ಸತ್ಯ ಮಹಿಳೆಗೆ ಅರಿವಾಗಿದೆ. ಇದನ್ನು ಪ್ರಶ್ನಿಸಿದಾಗ, ಪತಿಯ ಮನೆಯವರು ತಮ್ಮ ಅಸಲಿ ರೂಪ ತೋರಿಸಿದ್ದಾರೆ. “ನಿನ್ನ ಪತಿ ಬದುಕಬೇಕಾದರೆ ನಿನ್ನ ಒಂದು ಕಿಡ್ನಿ ದಾನ ಮಾಡು, ಇಲ್ಲದಿದ್ದರೆ ತವರಿನಿಂದ 30 ಲಕ್ಷ ರೂಪಾಯಿ ತಂದುಕೊಡು” ಎಂದು ಬೆದರಿಕೆ ಹಾಕಲು ಶುರು ಮಾಡಿದ್ದಾರೆ.
ದೂರಿನಲ್ಲಿ ಮಹಿಳೆಯು ತನ್ನ ಮಾವ ಮತ್ತು ಅತ್ತೆಯ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಾವ ತನ್ನ ಅನುಮತಿಯಿಲ್ಲದೆ ರೂಮಿಗೆ ನುಗ್ಗಿ ಫೋಟೋಗಳನ್ನು ತೆಗೆಯುತ್ತಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ಅಲ್ಲದೆ ಪತಿ ನಿಶಾಂತ್‌ಗೆ ಬೇರೆ ಮಹಿಳೆಯೊಂದಿಗೆ ಸಂಬಂಧವಿರುವ ವಿಷಯವೂ ಆತನ ಕುಟುಂಬಕ್ಕೆ ತಿಳಿದಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಮಹಿಳೆಯು ಪತಿಯ ಮನೆಯಿಂದ ಹೊರಬಂದು ಕಾನ್ಪುರದಲ್ಲಿ ನೆಲೆಸಿದ್ದಾರೆ. ಪೊಲೀಸರು ನಿಶಾಂತ್ ಮತ್ತು ಆತನ ಕುಟುಂಬದವರ ವಿರುದ್ಧ ವರದಕ್ಷಿಣೆ ಕಿರುಕುಳ, ವಂಚನೆ ಮತ್ತು ಕ್ರೌರ್ಯದ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿದಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಭಿಷೇಕ್ ಪಾಂಡೆ ತಿಳಿಸಿದ್ದಾರೆ.
ಇದನ್ನೂ ಓದಿ : ಟೊಯೋಟಾದಿಂದ ಬರೋಬ್ಬರಿ 5 ಹೊಸ 7-ಸೀಟರ್ ಕಾರುಗಳು ಭಾರತಕ್ಕೆ ಲಗ್ಗೆ!



















