ವಾಷಿಂಗ್ಟನ್: ಭಾರತದ ಮೇಲೆ ಸುಂಕದ ಯುದ್ಧ ಸಾರಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಂಗಳವಾರ ರಾತ್ರಿಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಮೂಲಕ ಮೋದಿಯವರಿಗೆ ಜನ್ಮದಿನದ ಶುಭಾಶಯ ಹೇಳಿದವರಲ್ಲಿ ಮೊದಲಿಗರು ಎನಿಸಿಕೊಂಡಿದ್ದಾರೆ. ಜೊತೆಗೆ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗಾಣಿಸಲು ನೀಡಿರುವ ಬೆಂಬಲಕ್ಕೆ ಧನ್ಯವಾದ ಹೇಳಿದ್ದಾರೆ. ಈ ಮಾತುಕತೆಯು ಹಳಿ ತಪ್ಪಿರುವ ಭಾರತ-ಅಮೆರಿಕ ಸಂಬಂಧವನ್ನು ಮತ್ತೆ ಹಳಿಗೆ ತರುವ ಸುಳಿವನ್ನು ನೀಡಿದೆ.
ಇದರ ಜೊತೆಗೆ, ಟ್ರಂಪ್ ಅವರು ಸಾಮಾಜಿಕ ಮಾಧ್ಯಮ ಟ್ರೂತ್ ಸೋಶಿಯಲ್ ಮೂಲಕ ತಮ್ಮ ಸಂದೇಶವನ್ನು ಹಂಚಿಕೊಂಡು, “ನನ್ನ ಸ್ನೇಹಿತ ಮೋದಿ ಜೀ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಅವರು ಅದ್ಭುತ ಕೆಲಸ ಮಾಡುತ್ತಿದ್ದಾರೆ. ಉಕ್ರೇನ್ ಯುದ್ಧ ಅಂತ್ಯಗೊಳಿಸುವುದಕ್ಕೆ ನೀಡಿದ ಬೆಂಬಲಕ್ಕೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, “ನಿಮ್ಮ ಸ್ನೇಹಮಯ ಸಂದೇಶಕ್ಕಾಗಿ ಧನ್ಯವಾದಗಳು. ಭಾರತ-ಅಮೆರಿಕ ಸಮಗ್ರ ಹಾಗೂ ಜಾಗತಿಕ ಸಹಭಾಗಿತ್ವವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಬದ್ಧನಾಗಿದ್ದೇನೆ. ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಕ್ರಮಗಳಿಗೆ ಭಾರತ ಬೆಂಬಲ ನೀಡುತ್ತದೆ” ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ.
ಇತ್ತೀಚೆಗಷ್ಟೇ ಟ್ರಂಪ್ ಅವರು ಮೋದಿ ಜತೆಗಿನ ತಮ್ಮ ಸ್ನೇಹವನ್ನು ಪ್ರತಿಪಾದಿಸುತ್ತಾ, ಭಾರತ-ಅಮೆರಿಕ ಸಂಬಂಧಗಳನ್ನು ವಿಶೇಷ ಎಂದಿದ್ದರು. ಅದಕ್ಕೆ ಮೋದಿ ಕೂಡ ಅಮೆರಿಕ ಜೊತೆಗಿನ ಸಹಭಾಗಿತ್ವವನ್ನು “ಅತ್ಯಂತ ಧನಾತ್ಮಕ ಮತ್ತು ಭವಿಷ್ಯಮುಖಿ” ಎಂದು ವರ್ಣಿಸಿ ಪ್ರತಿಕ್ರಿಯಿಸಿದ್ದರು.
ಹುಟ್ಟುಹಬ್ಬದ ಸಂಭ್ರಮದ ವೇಳೆ ಮಾತುಕತೆ
ಮೋದಿಯವರ 75ನೇ ಹುಟ್ಟುಹಬ್ಬದ ಹಿಂದಿನ ದಿನವಾದ ಮಂಗಳವಾರವೇ ಅವರಿಗೆ ಟ್ರಂಪ್ ಮಾಡಿದ ದೂರವಾಣಿ ಕರೆ, ಇತ್ತೀಚೆಗೆ ಉನ್ನತ ಮಟ್ಟದಲ್ಲಿ ಉದ್ಭವಿಸಿದ್ದ ವ್ಯಾಪಾರ ಹಾಗೂ ಸುಂಕ ಸಮಸ್ಯೆಗಳ ನಡುವೆಯೂ ಎರಡೂ ರಾಷ್ಟ್ರಗಳು ಸಂಬಂಧ ಸುಧಾರಿಸಲು ಮುಂದಾದ ಪ್ರಮುಖ ಹೆಜ್ಜೆ ಎಂದೇ ವರ್ಣಿಸಲಾಗುತ್ತಿದೆ. ವಿಶೇಷವಾಗಿ, ಅಮೆರಿಕ ವಿಧಿಸಿರುವ ಶೇ.50 ಆಮದು ಸುಂಕದ ಪರಿಣಾಮದಿಂದ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಈ ನಡೆ ಇನ್ನಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ವಹಿವಾಟು ಕ್ಷೇತ್ರದಲ್ಲಿಯೂ ಬೆಳವಣಿಗೆ ಕಂಡಿದ್ದು, ಭಾರತಕ್ಕೆ ಬಂದಿದ್ದ ಅಮೆರಿಕದ ಮುಖ್ಯ ವಾಣಿಜ್ಯ ಸಂಶೋಧಕ ಬ್ರೆಂಡನ್ ಲಿಂಚ್ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಮಾತುಕತೆ ‘ಧನಾತ್ಮಕ’ವಾಗಿದೆಯೆಂದು ಭಾರತ ವಾಣಿಜ್ಯ ಸಚಿವಾಲಯ ತಿಳಿಸಿದೆ. ವಾಣಿಜ್ಯ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಅಗರವಾಲ್ ಭಾರತದ ನಿಲುವನ್ನು ಪ್ರತಿನಿಧಿಸಿದ್ದು, ಶೀಘ್ರದಲ್ಲೇ ಉಭಯ ದೇಶಗಳ ನಡುವೆ ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.



















