ಚಾಂಪಿಯನ್ಸ್ ಟ್ರೋಫಿಯ ಆಯೋಜನೆಯ ವಿವಾದ ಮತ್ತಷ್ಟು ತಲೆ ದೋರುತ್ತಿದೆ. ಪಾಕ್, ಭಾರತದ ವಿರುದ್ಧ ಜಿದ್ದು ಸಾಧಿಸುವ ಕಾರ್ಯ ಮುಂದುವರೆಸಿದೆ.
ಬಿಸಿಸಿಐ ಮಾತ್ರ ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ತಂಡ ಕಳುಹಿಸಿಲ್ಲ ಎಂದು ಹೇಳಿದೆ. ಹೀಗಾಗಿ ಈ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಲಿ ಎಂಬುದು ಬಿಸಿಸಿಐ ವಾದ. ಆದರೆ ಇದಕ್ಕೆ ಒಪ್ಪದ ಪಾಕಿಸ್ತಾನ, ಹೈಬ್ರಿಡ್ ಮಾದರಿಗೆ ನಾವು ಸಿದ್ಧರಿಲ್ಲ ಎಂದು ಮತ್ತೊಮ್ಮೆ ಹೇಳಿದೆ. ಈ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ, ಹೈಬ್ರಿಡ್ ಮಾದರಿಯ ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲು ನಾವು ಸಿದ್ಧರಿಲ್ಲ ಎಂದಿದ್ದಾರೆ.
ಪಾಕಿಸ್ತಾನಕ್ಕೆ ಪ್ರಯಾಣಿಸದಿರುವ ಬಗ್ಗೆ ಬಿಸಿಸಿಐ ಯಿಂದ ಸ್ಪಷ್ಟನೆ ಕೇಳುವಂತೆ ನಾವು ಐಸಿಸಿಗೆ ಪತ್ರ ಬರೆದಿದ್ದೇವೆ. ಇದೀಗ ನಾವು ಐಸಿಸಿಯ ಉತ್ತರಕ್ಕಾಗಿ ಕಾಯುತ್ತಿದ್ದೇವೆ. ಐಸಿಸಿಯಿಂದ ಉತ್ತರ ಬಂದ ನಂತರವೇ ನಾವು ಮುಂದಿನ ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಐಸಿಸಿ ಶೀಘ್ರದಲ್ಲೇ ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಇದರಿಂದಾಗಿ ಪಾಕಿಸ್ತಾನವು ಸಿದ್ಧತೆಗಳನ್ನು ಮಾಡಿಕೊಳ್ಳಬಹುದು. ಕ್ರೀಡೆ ಮತ್ತು ರಾಜಕೀಯ ಎರಡು ವಿಭಿನ್ನ ವಿಷಯಗಳಾಗಿದ್ದು, ದೇಶವು ಇದನ್ನು ಒಟ್ಟಿಗೆ ನೋಡಬಾರದು ಎಂಬುವುದು ನಮ್ಮ ಭಾವನೆ ಎಂದಿದ್ದಾರೆ.