ದೊಡ್ಡಬಳ್ಳಾಪುರ : ಪತಿ ಮನೆಯವರ ಕಿರುಕುಳದಿಂದ ಬೇಸತ್ತ ಉಪನ್ಯಾಸಕಿ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ವಿಶ್ವೇಶ್ವರಯ್ಯ ಪಿಕಪ್ ಡ್ಯಾಮ್ನಲ್ಲಿ ನಡೆದಿದೆ.
ಪುಷ್ಪಾವತಿ (30) ಮೃತರಾಗಿದ್ದಾರೆ. 11 ತಿಂಗಳ ಹಿಂದೆ ತಪಸ್ಸಿಹಳ್ಳಿಯ ವೇಣು ಎಂಬವರ ಜತೆ ಇವರ ವಿವಾಹವಾಗಿತ್ತು. ಮದುವೆ ನಂತರ ಪತಿ ಮನೆಯಲ್ಲಿ ಪುಷ್ಪಾವತಿಗೆ ನಿರಂತರ ಕಿರುಕುಳ ನೀಡಲಾಗುತ್ತಿತ್ತು. ವರದಕ್ಷಿಣೆ, ನಿವೇಶನ ಕೊಡಿಸುವಂತೆ ಪೀಡಿಸುತ್ತಿದ್ದರು ಎಂದು ಪುಷ್ಪಾವತಿ ಆರೋಪಿಸಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪುಷ್ಪಾವತಿ ನಾಪತ್ತೆ ಆಗಿರುವ ಬಗ್ಗೆ ದೊಡ್ಡಬಳ್ಳಾಪುರ ಮಹಿಳಾ ಠಾಣೆಯಲ್ಲಿ ಕುಟುಂಬಸ್ಥರು ಕೇಸ್ ದಾಖಲಿಸಿದ್ದರು.
15 ದಿನಗಳ ಹಿಂದೆ ಗಂಡನ ಮನೆಯವರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಈ ವೇಳೆ ನನ್ನನ್ನು ಎಳೆದಾಡಿದ ಪರಿಣಾಮ ಗಾಯವಾಗಿದ್ದು, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿರುತ್ತಾರೆ. ನೀನು ಕಂಪ್ಲೇಂಟ್ ಕೊಟ್ಟರೆ ಮತ್ತೆ ಮನೆಗೆ ಬರಲು ಸಾಧ್ಯವಿಲ್ಲ ಎಂದು ಮಾವ ಹೆದರಿಸಿದ್ದರು. ಮತ್ತೆ ಇದೇ ವಿಚಾರವಾಗಿ ಮನೆಯಲ್ಲಿ ಗಲಾಟೆ ಆಗಿದ್ದು, ಈ ವೇಳೆ ನಾನು ಪೊಲೀಸರಿಗೆ ದೂರು ಕೊಡೋದಾಗಿ ಹೇಳಿದ್ದೆ. ಆಗ ನನ್ನ ಕತ್ತು ಹಿಸುಕಿ ಮನೆಯಿಂದ ಆಚೆ ಹಾಕಿದ್ದಾರೆ. ಇದನ್ನು ಪ್ರಶ್ನಿಸಲು ನನ್ನ ತಮ್ಮ ಹೋದಾಗ ಆತನ ಮೇಲೆಯೂ ಹಲ್ಲೆ ಮಾಡಿದ್ದು, ಆತ ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದ ಎಂದು ಪುಷ್ಪಾವತಿ ಆರೋಪಿಸಿದ್ದಾರೆ.