ನವದೆಹಲಿ: 2011ರ ವಿಶ್ವಕಪ್ ವಿಜೇತ ಹೀರೊ ಯುವರಾಜ್ ಸಿಂಗ್ ಅವರು ತಾವು ಸಾವಿನ ಅಂಚಿನಿಂದ ಮರಳಿ ಬಂದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ ಎದುರಾದ ಕ್ಯಾನ್ಸರ್ ಎಂಬ ಮಹಾಮಾರಿ ತಮ್ಮನ್ನು ಹೇಗೆ ಕುಗ್ಗಿಸಿತ್ತು ಮತ್ತು ವೈದ್ಯರು ನೀಡಿದ್ದ ಅಂತಿಮ ಗಡುವಿನ ಬಗ್ಗೆ ಯುವಿ ಮನಬಿಚ್ಚಿ ಮಾತನಾಡಿದ್ದಾರೆ.
2011ರ ವಿಶ್ವಕಪ್ನಲ್ಲಿ ‘ಸರಣಿ ಶ್ರೇಷ್ಠ’ ಪ್ರಶಸ್ತಿ ಪಡೆದ ಕೆಲವೇ ತಿಂಗಳಲ್ಲಿ ಯುವರಾಜ್ ಅವರಿಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಕೆವಿನ್ ಪೀಟರ್ಸನ್ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿದ ಅವರು, “ನೀವು ಇನ್ನು ಕೇವಲ 3 ರಿಂದ 6 ತಿಂಗಳು ಮಾತ್ರ ಬದುಕುತ್ತೀರಿ ಎಂದು ವೈದ್ಯರು ಹೇಳಿದಾಗ, ಮೊದಲು ಬರುವ ಆಲೋಚನೆಯೇ ಸಾವು. ನನ್ನ ಶ್ವಾಸಕೋಶ ಮತ್ತು ಹೃದಯದ ಮಧ್ಯೆ ಇದ್ದ ಗಡ್ಡೆಯು ನರಗಳ ಮೇಲೆ ಒತ್ತಡ ಹೇರುತ್ತಿತ್ತು. ಕೂಡಲೇ ಕೀಮೋಥೆರಪಿ ಮಾಡಿಸಿಕೊಳ್ಳದಿದ್ದರೆ ಹೃದಯಾಘಾತವಾಗುವ ಸಂಭವವಿದೆ ಎಂದು ವೈದ್ಯರು ಎಚ್ಚರಿಸಿದ್ದರು” ಎಂದು ಆ ಆಘಾತಕಾರಿ ಕ್ಷಣಗಳನ್ನು ಸ್ಮರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ಕನಸು ಮತ್ತು ಅಮೆರಿಕದ ಚಿಕಿತ್ಸೆ:
ಸುಮಾರು 7 ವರ್ಷಗಳ ಕಾಯುವಿಕೆಯ ನಂತರ ಟೆಸ್ಟ್ ಕ್ರಿಕೆಟ್ನಲ್ಲಿ ಸ್ಥಾನ ಗಟ್ಟಿಗೊಳಿಸಿಕೊಳ್ಳುತ್ತಿದ್ದ ಸಮಯದಲ್ಲಿಯೇ ಈ ಕಾಯಿಲೆ ಕಾಣಿಸಿಕೊಂಡಿದ್ದು ಯುವರಾಜ್ ಅವರಿಗೆ ದೊಡ್ಡ ಹೊಡೆತ ನೀಡಿತ್ತು. ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಬೇಕಿದ್ದ ಅವರು ಅನಿವಾರ್ಯವಾಗಿ ಅಮೆರಿಕಕ್ಕೆ ಚಿಕಿತ್ಸೆಗಾಗಿ ತೆರಳಬೇಕಾಯಿತು. 2011-12ರ ಅವಧಿಯಲ್ಲಿ ಅಮೆರಿಕದಲ್ಲಿ ನಡೆದ ಕೀಮೋಥೆರಪಿ ಪ್ರಕ್ರಿಯೆಯು ದೈಹಿಕವಾಗಿ ಮತ್ತು ಮಾನಸಿಕವಾಗಿ ತಮ್ಮನ್ನು ಹೈರಾಣಾಗಿಸಿತ್ತು ಎಂದು ಅವರು ಹೇಳಿದ್ದಾರೆ.
ವೈದ್ಯರ ಮಾತು ನೀಡಿದ ಸ್ಫೂರ್ತಿ:
ಖ್ಯಾತ ಆಂಕೊಲೊಜಿಸ್ಟ್ ಡಾ. ಲಾರೆನ್ಸ್ ಐನ್ಹಾರ್ನ್ ಅವರ ಮಾತುಗಳು ತಮಗೆ ಬದುಕುವ ಭರವಸೆ ನೀಡಿತು ಎಂದು ಯುವಿ ತಿಳಿಸಿದ್ದಾರೆ. “ನೀವು ಕ್ಯಾನ್ಸರ್ ಇಲ್ಲದ ವ್ಯಕ್ತಿಯಂತೆ ಇಲ್ಲಿಂದ ಹೊರನಡೆಯುತ್ತೀರಿ” ಎಂದು ಡಾಕ್ಟರ್ ಹೇಳಿದಾಗ ನನ್ನಲ್ಲಿ ಹೊಸ ಶಕ್ತಿ ಬಂದಂತಾಯಿತು. ಮರಳಿ ಕ್ರಿಕೆಟ್ ಆಡಬಹುದು ಎಂದು ತಿಳಿದಾಗ ಅದು ನನಗೆ ಸಿಕ್ಕ ಎರಡನೇ ಜೀವನ ಎಂದೆನಿಸಿತು” ಎಂದು ಅವರು ಭಾವನಾತ್ಮಕವಾಗಿ ಹೇಳಿದ್ದಾರೆ.
ಅಸಾಧ್ಯವನ್ನು ಸಾಧ್ಯವಾಗಿಸಿದ ಕಮ್ಬ್ಯಾಕ್:
ಜಗತ್ತೇ ಇನ್ನು ಯುವಿ ಕ್ರಿಕೆಟ್ ಬದುಕು ಮುಗಿಯಿತು ಎಂದು ಭಾವಿಸಿದ್ದಾಗ, 2012ರಲ್ಲಿ ಯುವರಾಜ್ ಅಂತರಾಷ್ಟ್ರೀಯ ಕ್ರಿಕೆಟ್ಗೆ ಅದ್ಭುತವಾಗಿ ಮರಳಿದರು. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 150 ರನ್ ಸಿಡಿಸಿದ್ದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿ ಉಳಿದಿದೆ. 2019ರಲ್ಲಿ ಅವರು ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು.
ಇದನ್ನೂ ಓದಿ: ವುಮೆನ್ಸ್ ಪ್ರೀಮಿಯರ್ ಲೀಗ್ 2026 | ಜೆಮಿಮಾ ಸಾರಥ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ಗೆ ಲಕ್



















