ಬೆಂಗಳೂರು: ಮೊದಲೆಲ್ಲ ಕ್ರೆಡಿಟ್ ಕಾರ್ಡ್ ಗಳನ್ನು ಶಾಪಿಂಗ್, ದುಬಾರಿ ವಸ್ತುಗಳ ಖರೀದಿಗಾಗಿ ಮಾತ್ರ ಬಳಸಲಾಗುತ್ತಿದೆ. ಆದರೆ, ಈಗ ಹೋಟೆಲ್ ನಲ್ಲಿ ಊಟ ಮಾಡಿದ್ದರಿಂದ ಹಿಡಿದು ಮನೆ ಬಾಡಿಗೆ ಕಟ್ಟುವವರೆಗೆ ಕ್ರೆಡಿಟ್ ಕಾರ್ಡ್ ಗಳನ್ನು ಬಳಸಲು ಅವಕಾಶವಿದೆ. ಕ್ರೆಡಿಟ್ ಕಾರ್ಡ್ ಕಂಪನಿಗಳು ಕೂಡ ಹತ್ತಾರು ಆಫರ್ ಗಳನ್ನು ನೀಡುತ್ತವೆ. ಆದರೆ, ನೀವು ಕ್ರೆಡಿಟ್ ಕಾರ್ಡ್ ಬಳಸಿ ಮನೆ ಬಾಡಿಗೆ ಪಾವತಿಸುತ್ತೀರಾ? ಹಾಗಾದರೆ, ನೀವು ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ.
ಕ್ರೆಡಿಟ್ ಸ್ಕೋರ್ ಗೆ ಹೊಡೆತ ಬೀಳುತ್ತಾ?
ಕ್ರೆಡಿಟ್ ಕಾರ್ಡ್ ಬಳಸಿ ಮನೆಯ ಬಾಡಿಗೆ ಪಾವತಿಸುವುದರಿಂದ ಕ್ರೆಡಿಟ್ ಸ್ಕೋರ್ ಗೆ ಹೊಡೆತ ಬೀಳುತ್ತದೆ ಎಂದೇ ಹೆಚ್ಚಿನ ಜನ ಭಾವಿಸಿರುತ್ತಾರೆ. ಆದರೆ, ಹೀಗೆ ಬಾಡಿಗೆ ಪಾವತಿಸುವುದರಿಂದ ಹೊಡೆತ ಬೀಳುವುದಿಲ್ಲ. ಆದರೆ, ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಕಟ್ಟಿ, ಆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸರಿಯಾದ ಸಮಯಕ್ಕೆ ಪಾವತಿಸದಿದ್ದರೆ, ಭಾರಿ ದಂಡ ತೆರಬೇಕಾಗುತ್ತದೆ.
ಇದರ ಜತೆಗೆ ಇನ್ನೂ ಹಲವು ನಿಮಯಗಳನ್ನು ನೀವು ತಿಳಿದುಕೊಂಡಿರಬೇಕು. ಕ್ರೆಡಿಟ್ ಕಾರ್ಡ್ ಮೂಲಕ ಬಾಡಿಗೆ ಕಟ್ಟಿದರೆ ಕೆಲವು ಅಗ್ರಿಗೇಟರ್ ಗಳು, ಕಾರ್ಡ್ ಕಂಪನಿಗಳು ಸರ್ವಿಸ್ ಚಾರ್ಜ್ ಅಥವಾ ಕನ್ವಿನಿಯನ್ಸ್ ಫೀ ವಿಧಿಸುತ್ತವೆ. ಉದಾಹರಣೆಗೆ, ತಿಂಗಳ ಬಾಡಿಗೆ 20,000 ರೂಪಾಯಿ ಇದ್ದರೆ, ಶೇ.1 ರಿಂದ 2.5 ರಷ್ಟು, ಅಂದ್ರೆ 200 ರಿಂದ 500 ರೂಪಾಯಿ ವರೆಗೆ ಜಾಸ್ತಿ ನೀವು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇದು ಸಾಲ ಮಾಡಿ, ಬಡ್ಡಿ ಕಟ್ಟಿದಂತೆಯೇ ಆಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಕಟ್ಟಿದರೆ ಕ್ಯಾಶ್ ಬ್ಯಾಕ್ ಅಥವಾ ರಿವಾರ್ಡ್ ಪಾಯಿಂಟ್ಸ್ ಸಿಕ್ಕರೆ ಲಾಭವಾಗುತ್ತದೆ. ಇದನ್ನು ಗಮನಿಸಿಯೇ ಕ್ರೆಡಿಟ್ ಕಾರ್ಡ್ ಬಳಸಬೇಕು. ಇನ್ನು ಕೆಲವು ಬ್ಯಾಂಕುಗಳು ಕ್ರೆಡಿಟ್ ಕಾರ್ಡ್ ನಿಂದ ಬಾಡಿಗೆ ಕಟ್ಟುವುದನ್ನು Quasi-Cash ಎಂದು ಪರಿಗಣಿಸುತ್ತವೆ. ಅಂದ್ರೆ ಕ್ರೆಡಿಟ್ ಕಾರ್ಡ್ ನಿಂದ ಹಣ ತೆಗೆದಂತೆಯೇ ಲೆಕ್ಕ ಈ ರೀತಿ ಮಾಡಿದರೆ ರಿವಾರ್ಡ್ ಪಾಯಿಂಟ್ಸ್ ಸಿಗಲ್ಲ. ಹಾಗಾಗಿ, ಈ ನಿಯಮಗಳನ್ನು ತಿಳಿದುಕೊಂಡೇ ಕ್ರೆಡಿಟ್ ಕಾರ್ಡ್ ಬಳಸುವುದು ಉತ್ತಮ.



















