ನವದೆಹಲಿ: ದೇಶದಲ್ಲಿ ಅತೀ ಹೆಚ್ಚು ದಾನ ಮಾಡಿದವರ ಪಟ್ಟಿಯೊಂದು ಬಿಡುಗಡೆಯಾಗಿದ್ದು, ಈ ವ್ಯಕ್ತಿಯ ಕಾರ್ಯಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಈ ಪಟ್ಟಿಯಲ್ಲಿ ಎಚ್‌ಸಿಎಲ್ ಟೆಕ್ನಾಲಜಿ ಸಂಸ್ಥಾಪಕ ಶಿವ ನಾಡರ್ ಮೊದಲ ಸ್ಥಾನದಲ್ಲಿದ್ದಾರೆ. ಎಡೆಲ್ ಗೀವ್ – ಹ್ಯುರನ್ ಇಂಡಿಯಾ’ ಭಾರತದ ಟಾಪ್ 10 ಮಹಾದಾನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಶಿವ ನಾಡರ್ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಮುಕೇಶ್ ಅಂಬಾನಿ ಎರಡನೇ ಹಾಗೂ ಬಜಾಜ್ ಕುಟುಂಬ ಮೂರು, ಬಿರ್ಲಾ ಕುಟುಂಬ ನಾಲ್ಕು, ಗೌತಮ್ ಅದಾನಿ ಐದನೇ ಸ್ಥಾನ ಪಡೆದುಕೊಂಡಿವೆ.
ಎಚ್‌ಸಿಎಲ್ ಟೆಕ್ನಾಲಜಿ ಸಂಸ್ಥಾಪಕ ಶಿವ ನಾಡರ್ ಅವರ ಆಸ್ತಿ 3.14 ಲಕ್ಷ ಕೋಟಿ ರೂ. ಇದ್ದು, ಈ ವರ್ಷದಲ್ಲಿ 2,153 ಕೋಟಿ ರೂ. ದಾನ ಮಾಡಿದ್ದಾರೆ. ಅವರು, ಪ್ರತಿದಿನ 5.9 ಕೋಟಿ ರೂ. ದೇಣಿಗೆಯನ್ನು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿದ್ದಾರೆ. ಅಲ್ಲದೇ, ಹಿಂದಿನ ವರ್ಷ ಕೂಡ ಅವರೇ ಮಹಾ ದಾನಿಯಾಗಿದ್ದರು.
ಮುಕೇಶ್ ಅಂಬಾನಿ ಮಹಾದಾನಿಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇವರ ಬಳಿ 10.14 ಲಕ್ಷ ಕೋಟಿ ರೂ. ಆಸ್ತಿಯಿದ್ದು, 407 ಕೋಟಿ ರೂ. ದಾನ ಮಾಡಿದ್ದಾರೆ. ಮೂರನೇ ಸ್ಥಾನದಲ್ಲಿ ಬಜಾಜ್ ಫ್ಯಾಮಿಲಿ ಇದ್ದು, 352 ಕೋಟಿ ರೂ. ದಾನ ನೀಡಿದ್ದಾರೆ. ಕುಮಾರ್ ಮಂಗಳಂ ಬಿರ್ಲಾ 334 ಕೋಟಿ ರೂ. ದಾನ ಮಾಡಿದ್ದಾರೆ. ಗೌತಮ್ ಅದಾನಿ ಅವರು ಮಹಾದಾನಿಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. 11 ಲಕ್ಷ ಕೋಟಿ ರೂಪಾಯಿ ಆಸ್ತಿ ಇದ್ದರೂ 330 ಕೋಟಿ ರೂ. ದಾನ ಮಾಡಿದ್ದಾರೆ.
ನಿಲೇಕೇಣಿ ಹಾಗೂ ಅವರ ಪತ್ನಿ ರೋಹಿಣಿ ನೀಲೇಕೇಣಿ ಇಬ್ಬರು ಕೂಡ ಟಾಪ್ 10 ಮಹಾದಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ದಂಪತಿ 461 ಕೋಟಿ ರೂ. ದಾನ ಮಾಡಿದ್ದಾರೆ. ಪ್ರಸಕ್ತ ವರ್ಷ ದಾನಿಗಳು ಏರಿಕೆಯಾಗಿದ್ದು, ದಾನದ ಪ್ರಮಾಣ ಇಳಿಕೆ ಕಂಡಿದೆ. ಈ ವರ್ಷ 203 ವ್ಯಕ್ತಿಗಳು 5 ಕೋಟಿ ರೂ. ಗಿಂತ ಹೆಚ್ಚಿನ ದಾನ ಮಾಡಿದ್ದಾರೆ. 2023ರಲ್ಲಿ 199 ದಾನಿಗಳ ಸರಾಸರಿ ದಾನದ ಪ್ರಮಾಣ 71 ಕೋಟಿ ರೂ. ಇತ್ತು. ಈ ವರ್ಷ ಈ ಸರಾಸರಿಯ ಪ್ರಮಾಣ 43 ಕೋಟಿ ರೂ.ಗೆ ಇಳಿಕೆ ಕಂಡಿದೆ. ಭಾರತದ ಅತ್ಯಂತ ಶ್ರೀಮಂತರಾಗಿರುವ ಮುಖೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ದಾನ ದಾನ ಮಾಡುವುದರಲ್ಲಿ ಹಿಂದೆ ಬಿದ್ದಿದ್ದಾರೆ.