ವಯನಾಡು: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ರಾಜೀನಾಮೆಯಿಂದ ತೆರವಾಗಿರುವ ಕೇರಳದ ವಯನಾಡು ಲೋಕಸಭೆ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿದೆ.
ತಾನು ಗೆದ್ದ ಕ್ಷೇತ್ರ ಉಳಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ ಗಾಂಧಿ ಮನೆತನಕ್ಕೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಕೂಡ ಅಳೆದು ತೂಗಿ ಎದುರಾಳಿಯನ್ನು ನಿಲ್ಲಿಸಿದೆ.
ಬಿಜೆಪಿಯಿಂದ ಅಖಾಡಕ್ಕೆ 39 ವರ್ಷದ ನವ್ಯಾ ಹರಿದಾಸ್ ಕಣಕ್ಕೆ ಇಳಿದಿದ್ದಾರೆ. ನವ್ಯಾ ಅವರು ಕೋಳಿಕ್ಕೋಡ್ ಕಾರ್ಪೊರೇಷನ್ ನಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿದ್ದವರು. ಕಾರ್ಪೊರೇಷನ್ ನಲ್ಲಿ ಬಿಜೆಪಿ ಸಂಸದೀಯ ಪಕ್ಷದ ನಾಯಕಿಯೂ ಆಗಿದ್ದರು.
ಅವರು ಕಲ್ಲಿಕೋಟೆ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಎಂಸಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಮಾಡಿದ್ದಾರೆ. 2021ರಲ್ಲಿ ಕೋಯಿಕ್ಕೋಡ್ ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಅಹಮ್ಮದ್ ದೇವರಕೋಯಿಲ್ ಎದುರು ಸೋಲು ಕಂಡಿದ್ದರು.
ಚುನಾವಣೆಗೆ ಸ್ಪರ್ಧಿಸುತ್ತಿದ್ದಂತೆ ಮಾತನಾಡಿರುವ ನವ್ಯಾ, ಕಾಂಗ್ರೆಸ್ ಕುಟುಂಬ ವಾಸ್ತವವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಈ ಚುನಾವಣೆ ನಂತರ, ವಯನಾಡು ನಿವಾಸಿಗಳಿಗೆ ತಮ್ಮ ಸಮಸ್ಯೆಗಳನ್ನು ಸರಿಪಡಿಸುವ ಉತ್ತಮ ಸಂಸದನ ಅಗತ್ಯವಿದೆ ಎಂದು ಹೇಳಿದ್ದಾರೆ.
ಕೇರಳದಲ್ಲಿ ಎರಡು ಬಾರಿ ಕೌನ್ಸಿಲರ್ ಆಗಿ ಚುನಾಯಿತಳಾಗಿದ್ದೆ. ಕಳೆದ ಎಂಟು ವರ್ಷಗಳಿಂದ ನಾನು ರಾಜಕೀಯ ರಂಗದಲ್ಲಿ ಇದ್ದೇನೆ. ಜನರ ಸೇವೆ ಮಾಡುತ್ತಾ, ಅವರ ಸಮಸ್ಯೆಗಳನ್ನು ಅರಿತಿದ್ದೇನೆ. ಸದಾ ಸಮಯ ಅವರ ಜತೆಗೆ ಕಳೆಯುವುದೇ ನನ್ನ ಗುರಿ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಯನಾಡು ಲೋಕಸಭೆ ಮತ್ತು ಉತ್ತರ ಪ್ರದೇಶ ರಾಯ್‌ಬರೇಲಿ ಲೋಕಸಭೆಯ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ರಾಯ್‌ಬರೇಲಿಯನ್ನು ಉಳಿಸಿಕೊಂಡು, ವಯನಾಡು ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ವಯನಾಡು ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದೆ. ನ. 13ರಂದು ಈ ಕ್ಷೇತ್ರಕ್ಕೆ ಮತದಾನ ನಡೆಯಲಿದ್ದು, ನ. 23ರಂದು ಫಲಿತಾಂಶ ಹೊರ ಬೀಳಲಿದೆ.