ನವದೆಹಲಿ: ರಾಷ್ಟ್ರದಲ್ಲಿನ 30 ಸಿಎಂಗಳ ಆಸ್ತಿಯ ಮೌಲ್ಯ ಬಿಡುಗಡೆಯಾಗಿದ್ದು, ಈ ಪೈಕಿ ರಾಜ್ಯದ ಸಿಎಂ ಮೂರನೇ ಸ್ಥಾನ ಪಡೆದಿದ್ದಾರೆ.
ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ (richest Chief Minister List) ಕರ್ನಾಟಕದ ಸಿಎಂ ಸಿದ್ದರಾಮಯ್ಯ (Siddaramaiah) 3ನೇ ಸ್ಥಾನ ಪಡೆದಿದ್ದು, ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು ಅಗ್ರ ಸ್ಥಾನ ಗಳಿಸಿದ್ದಾರೆ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (Association for Democratic Reforms) ಈ ಪಟ್ಟಿ ಬಿಡುಗಡೆ ಮಾಡಿದೆ. ದೇಶದ 30 ಸಿಎಂಗಳ ಒಟ್ಟು ಆಸ್ತಿಯ ಮೌಲ್ಯವನ್ನು ಈ ಪಟ್ಟಿಯಲ್ಲಿ ಹೇಳಲಾಗಿದೆ. ಒಟ್ಟು 30 ಸಿಎಂಗಳ ಆಸ್ತಿ ಮೌಲ್ಯ 1,632 ಕೋಟಿ ರೂ. ಆಗಿದೆ. ಈ ಪೈಕಿ ಮೊದಲ ಸ್ಥಾನದಲ್ಲಿರುವ ಆಂಧ್ರಪ್ರದೇಶದ ಸಿಎಂ ನಾರಾ ಚಂದ್ರಬಾಬು ನಾಯ್ಡು ಅವರ ಒಟ್ಟು ಆಸ್ತಿ 931 ಕೋಟಿ ರೂ. ಆಗಿದೆ. ಎರಡನೇ ಸ್ಥಾನದಲ್ಲಿರುವ ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಅವರ ಆಸ್ತಿಯ ಮೌಲ್ಯ 332 ಕೋಟಿ ರೂ.ಗೂ ಹೆಚ್ಚಾಗಿದೆ. ಮೂರನೇ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರ ಆಸ್ತಿ 51 ಕೋಟಿ ರೂ. ಆಗಿದೆ.

ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್ ಆಧರಿಸಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಯು ಭಾರತದ ಶ್ರೀಮಂತ ಮುಖ್ಯಮಂತ್ರಿಗಳ ಕುರಿತ ವರದಿ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮಾಹಿತಿ ಇದೆ ಎನ್ನಲಾಗಿದೆ. ಎಲ್ಲ ಸಿಎಂಗಳ ಅರ್ಧಕ್ಕಿಂತ ಹೆಚ್ಚು ಆಸ್ತಿ ಆಂಧ್ರ ಮುಖ್ಯಮಂತ್ರಿ ಅವರ ಕೈಯಲ್ಲೇ ಇದೆ. ಅಲ್ಲದೆ, 30 ಸಿಎಂಗಳಲ್ಲಿ ಇಬ್ಬರು ಮುಖ್ಯಮಂತ್ರಿಗಳಷ್ಟೇ ಶತಕೋಟ್ಯಧಿಪತಿಗಳಿದ್ದಾರೆ.

ತೆಲಂಗಾಣ ಸಿಎಂ ರೇವಂತ್ ರೆಡ್ಡಿ 30 ಕೋಟಿ ರೂ. ಆಸ್ತಿ ಹೊಂದಿದ್ದಾರೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ (1.46 ಕೋಟಿ ರೂ.), ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ (1.54 ಕೋಟಿ ರೂ.), ಬಿಹಾರದ ನಿತೀಶ್ ಕುಮಾರ್ (1.64 ಕೋಟಿ ರೂ.), ಪಂಜಾಬ್‌ನ ಭಗವಂತ್ ಮಾನ್ (1.97 ಕೋಟಿ ರೂ.), ಒಡಿಶಾದ ಮೋಹನ್ ಚರಣ್ ಮಾಝಿ (1.97 ಕೋಟಿ ರೂ.) ಮತ್ತು ಛತ್ತೀಸ್‌ಗಢದ ವಿಷ್ಣು ದೇವ್ ಸಾಯಿ (3.80 ಕೋಟಿ ರೂ.), ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ 55.24 ಲಕ್ಷ ರೂ. ಗೂ ಹೆಚ್ಚು ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 15.38 ಲಕ್ಷ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅತೀ ಕಡಿಮೆ ಆಸ್ತಿ ಹೊಂದಿರುವ ಮುಖ್ಯಮಂತ್ರಿಯಾಗಿದ್ದಾರೆ.