ಭಾರತ-ಪಾಕಿಸ್ಥಾನ ನಡುವೆ ಯುದ್ಧ ನಡೆದರೆ ಎಷ್ಟು ಹಣ ಖರ್ಚಾಗುತ್ತೆ. ಇಂಥದ್ದೊಂದು ಪ್ರಶ್ನೆ ಹಲವರನ್ನು ಕಾಡುವುದು ಸಹಜ.
ಹೌದು! ಇಂದಿನ ಅತ್ಯಾಧುನಿಕ ಯುದ್ಧೋಪಕರಣಗಳ ನಿರ್ವಹಣೆ, ಯೋಧರ ಊಟೋಪಚಾರ ಸೇರಿದಂತೆ ಸಾಮಾನು ಸರಂಜಾಮು, ಸಾಗಾಟ ಹೀಗೆ ನೂರಾರು ಬಗೆಯಲ್ಲಿ ಹಣ ವಿನಿಯೋಗಿಸಬೇಕಾಗುತ್ತೆ. ಹೀಗಾಗಿ ಇಂಡೋ-ಪಾಕ್ ಸಮರದ ಬಜೆಟ್ ಎಷ್ಟು ಎನ್ನುವುದು ಈಗಿರುವ ಪ್ರಶ್ನೆ.
ಹಾಗೆ ನೋಡಿದರೆ ತಜ್ಞರು ಕೂಡ ಇಂತಿಷ್ಟೇ ಅಂತಾ ಅಂದಾಜಿಸುವುದು ಈಗಿನ ಕಾಲದಲ್ಲಿ ಬಲು ಕಷ್ಟ ಅಂತಿದ್ದಾರೆ. ಆದರೆ 1999ರಲ್ಲಿ ನಡೆದ ಕಾರ್ಗಿಲ್ ಕದನ ಎರಡೂವರೆ ತಿಂಗಳು ನಡೆದಿತ್ತು. ಈ ಸಮರಕ್ಕೆ ಅಂದಾಜು 5 ರಿಂದ 10 ಸಾವಿರ ಕೋಟಿ ಆಗಿನ ಕಾಲಕ್ಕೆ ಖರ್ಚು ಮಾಡಲಾಗಿತ್ತು. ಆದರೀಗ ಕಾಲಮಾನ, ಯುದ್ಧ ನೀತಿ, ಶೈಲಿ ಎಲ್ಲವೂ ಬದಲಾಗಿದ್ದು ಅಪಾರ ಹಣ ಬಯಸುತ್ತೆ. ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಅಂದಾಜು 2 ಸಾವಿರ ಕೋಟಿ ಖರ್ಚಾಗಿದೆ. ಆದರೆ, ಅಂದು ಕಾರ್ಗಿಲ್ ನಂತೆ ಈ ಬಾರಿ ಯುದ್ಧವಾದರೆ ಕೇವಲ ಒಂದೇ ಪ್ರದೇಶಕ್ಕೆ ಸೀಮಿತವಾಗಿರುವುದಿಲ್ಲ. ಹೀಗಾಗಿ ವೆಚ್ಚವೂ ಹತ್ತಾರು ಲಕ್ಷ ಕೋಟಿಗಳನ್ನು ಮೀರುತ್ತೆ ಎನ್ನಲಾಗುತ್ತಿದೆ. ಪ್ರತಿನಿತ್ಯ ಯೋಧರ ಖರ್ಚುವೆಚ್ಚಕ್ಕೆ 10 ರಿಂದ 15 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.



















