ಬಾಂಗ್ಲಾದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ರಾಜಕೀಯ ಅರಾಜಕತೆ ಉಂಟಾಗಿದೆ. ಹೀಗಾಗಿ ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ಬಿಟ್ಟು ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.
ಈ ವೇಳೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಶ್ನೆ ಕೇಳಿದ್ದಾರೆ. ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಘಟನೆಗಳ ಹಿಂದೆ ಯಾವುದಾದರೂ ಬೇರೆ ದೇಶಗಳ ಕೈವಾಡವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಬದಲಾಗುತ್ತಿರುವ ಬೆಳವಣಿಗೆಗಳ ಮೇಲೆ ಸರ್ಕಾರ ಕಣ್ಣಿಟ್ಟಿದೆ. ಪಾಕಿಸ್ತಾನದ ರಾಜತಾಂತ್ರಿಕರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಚಳವಳಿಯ ಚಿತ್ರದೊಂದಿಗೆ ಡಿಪಿ ಪೋಸ್ಟ್ ಮಾಡಿದ್ದರು. ಈ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿ ಮೀಸಲಾತಿಗಾಗಿ ನಡೆದ ಹಿಂಸಾಚಾರ ಮತ್ತು ಪ್ರತಿಭಟನೆಗಳ ನಂತರ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದರು. ಹಸೀನಾ ಬ್ರಿಟನ್ ನಲ್ಲಿ ಆಶ್ರಯ ಪಡೆಯುವವರೆಗೂ ಅವರು ಭಾರತದಲ್ಲಿಯೇ ಇರುತ್ತಾರೆ. ಸೋಮವಾರ ಅವರ ಸರ್ಕಾರ ಪತನದ ನಂತರ ಭಾರತ ಸರ್ಕಾರವು ಮಧ್ಯಂತರ ವಲಸೆ ಅನುಮತಿ ನೀಡಿದೆ. ಅಲ್ಲಿನ ಪರಿಸ್ಥಿತಿ ಗಮನಿಸುತ್ತಿದ್ದೇವೆ ಎಂದು ಭಾರತ ಸರ್ಕಾರ ಸರ್ವಪಕ್ಷ ಸಭೆಯಲ್ಲಿ ಹೇಳಲಾಗಿದೆ.
ಬಾಂಗ್ಲಾದೇಶದಲ್ಲಿ ಸುಮಾರು 20 ಸಾವಿರ ಜನರು ಸಿಲುಕಿದ್ದಾರೆ. ಈ ಪೈಕಿ 8000 ವಿದ್ಯಾರ್ಥಿಗಳು ಭಾರತಕ್ಕೆ ಮರಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಕೇಂದ್ರ ಸರ್ಕಾರ ಬಾಂಗ್ಲಾದೇಶ ಸೇನೆಯೊಂದಿಗೆ ಸಂಪರ್ಕದಲ್ಲಿದೆ ಎಂದು ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದಾರೆ.