ನವದೆಹಲಿ: ಆಸ್ಕರ್ ಪ್ರಶಸ್ತಿ ಪುರಸ್ಕೃತ ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಅವರು ಇತ್ತೀಚೆಗೆ ಬಾಲಿವುಡ್‌ನಲ್ಲಿ ತಮಗೆ ಕೆಲಸ ಕಡಿಮೆಯಾಗುತ್ತಿರುವುದಕ್ಕೆ “ಕೋಮುವಾದಿ ಮನಸ್ಥಿತಿ” ಕಾರಣವಿರಬಹುದು ಎಂದು ನೀಡಿದ್ದ ಹೇಳಿಕೆ ಈಗ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ. ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ), ರೆಹಮಾನ್ ಅವರಿಗೆ ಬಾಲಿವುಡ್‌ನಲ್ಲಿ ಮತ್ತೆ ಕೆಲಸ ಬೇಕಿದ್ದರೆ ಅವರು ಕೂಡಲೇ ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರಳುವುದು) ಮಾಡಲಿ ಎಂದು ಸಲಹೆ ನೀಡಿದೆ.
ಹಿಂದೂ ಧರ್ಮಕ್ಕೆ ಮರಳಿ ಎಂದು ಸಲಹೆ
ವಿಎಚ್‌ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ರೆಹಮಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅವರು ಒಂದು ನಿರ್ದಿಷ್ಟ ಬಣದ ಪರವಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. “ರೆಹಮಾನ್ ಅವರು ಒಮ್ಮೆ ಹಿಂದೂವಾಗಿದ್ದರು (ದಿಲೀಪ್ ಕುಮಾರ್). ಅವರು ಏಕೆ ಇಸ್ಲಾಂಗೆ ಮತಾಂತರಗೊಂಡರು? ಈಗ ಮತ್ತೆ ಘರ್ ವಾಪಸಿ ಮಾಡಿ, ಬಹುಶಃ ಆಗ ನಿಮಗೆ ಮತ್ತೆ ಕೆಲಸ ಸಿಗಲು ಪ್ರಾರಂಭವಾಗಬಹುದು” ಎಂದು ಬನ್ಸಾಲ್ ಹೇಳಿದ್ದಾರೆ. ಅಲ್ಲದೆ, ರೆಹಮಾನ್ ಅವರು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ದಾರಿಯಲ್ಲಿ ಸಾಗುತ್ತಿದ್ದು, ವ್ಯವಸ್ಥೆಯನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಚಿತ್ರೋದ್ಯಮಕ್ಕೆ ಕಳಂಕ ತರುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.

ರೆಹಮಾನ್ ಹೇಳಿದ್ದೇನು?
ಬಿಬಿಸಿ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಎ.ಆರ್. ರೆಹಮಾನ್, ಕಳೆದ ಎಂಟು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ತಮಗೆ ಅವಕಾಶಗಳು ಕಡಿಮೆಯಾಗಿವೆ ಎಂದು ಹೇಳಿದ್ದರು. “ಇದರ ಹಿಂದೆ ಕೋಮುವಾದಿ ಅಂಶಗಳೂ ಇರಬಹುದು, ಆದರೆ ಅದು ನನಗೆ ನೇರವಾಗಿ ಕಾಣಿಸುತ್ತಿಲ್ಲ. ಕೆಲವು ಮ್ಯೂಸಿಕ್ ಕಂಪನಿಗಳು ಮತ್ತು ಸೃಜನಶೀಲರಲ್ಲದ ವ್ಯಕ್ತಿಗಳು ಈಗ ಅಧಿಕಾರದಲ್ಲಿದ್ದು, ಅವರು ಯೋಜನೆಗಳನ್ನು ಬದಲಿಸುತ್ತಿದ್ದಾರೆ ಎಂದು ಅನಿಸುತ್ತಿದೆ” ಎಂದು ಅವರು ತಿಳಿಸಿದ್ದರು. ಈ ಹೇಳಿಕೆಯು ಚಿತ್ರರಂಗ ಮತ್ತು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಕೆಲಸಕ್ಕಾಗಿ ಯಾರನ್ನೂ ಹುಡುಕಿಕೊಂಡು ಹೋಗುವುದಿಲ್ಲ: ಸಂಗೀತ ಮಾಂತ್ರಿಕನ ಸ್ಪಷ್ಟನೆ
ತಮ್ಮ ಮೇಲೆ ನಡೆಯುತ್ತಿರುವ ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳದ ರೆಹಮಾನ್, ತಾವು ಕೆಲಸಕ್ಕಾಗಿ ಯಾರನ್ನೂ ಹುಡುಕಿಕೊಂಡು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. “ನನಗೆ ಕೆಲಸದ ಅಗತ್ಯವಿಲ್ಲ ಅಥವಾ ನಾನು ಕೆಲಸವನ್ನು ಹುಡುಕುತ್ತಿಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವ ನನಗೆ ಸಲ್ಲಬೇಕಾದ್ದು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ಒಂದು ವೇಳೆ ಕೆಲಸ ಕಡಿಮೆಯಾದರೆ, ನನ್ನ ಕುಟುಂಬದೊಂದಿಗೆ ಕಳೆಯಲು ನನಗೆ ಹೆಚ್ಚಿನ ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಅವರು ಶಾಂತವಾಗಿ ಉತ್ತರಿಸಿದ್ದಾರೆ.
ಇದನ್ನೂ ಓದಿ: ಅಲಿಬಾಗ್‌ನಲ್ಲಿ ವಿರಾಟ್-ಅನುಷ್ಕಾ ದಂಪತಿಯ 19 ಕೋಟಿ ಮೌಲ್ಯದ ಭವ್ಯ ವಿಲ್ಲಾ | ಹೇಗಿದೆ ಗೊತ್ತಾ ‘ವಿರುಷ್ಕಾ’ ಕನಸಿನ ಅರಮನೆ?



















