ಮುಂಬೈ : ವಾಣಿಜ್ಯ ನಗರಿ ಮುುಂಬೈನಲ್ಲಿ ಮಾನವಕುಲವೇ ತಲೆತಗ್ಗಿಸುವಂತಹ ನಾಚಿಕೆಗೇಡಿನ ಘಟನೆಯೊಂದು ವರದಿಯಾಗಿದೆ. ಮಾತು ಬಾರದ ಮತ್ತು ಕೇಳಿಸದ 20 ವರ್ಷದ ವಿಕಲಚೇತನ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು, ಈ ಕ್ರೂರ ಕೃತ್ಯ ನಡೆಸಿದ್ದು ಯಾರು ಎಂಬ ಬಗ್ಗೆ ನಡೆದ ಸುದೀರ್ಘ ತನಿಖೆಯಲ್ಲಿ ಹೊರಬಂದ ಆಘಾತಕಾರಿ ಅಂಶವು ಎಲ್ಲರನ್ನೂ ಹೌಹಾರುವಂತೆ ಮಾಡಿದೆ. ದಕ್ಷಿಣ ಮುಂಬೈನ ಕಫ್ ಪರೇಡ್ ಪ್ರದೇಶದಲ್ಲಿ ನಡೆದ ಘಟನೆ ಇದು.
ಹೊಟ್ಟೆಯಲ್ಲಿ ‘ಹುಳುಗಳು’ ಹರಿಯುತ್ತಿವೆ ಎಂದಿದ್ದ ಯುವತಿ
ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಪ್ರಕರಣ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಯುವತಿಯು ತನ್ನ ಅಜ್ಜಿಯ ಬಳಿ ಹೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತಿದೆ ಎಂದು ಸನ್ನೆಗಳ ಮೂಲಕ ತಿಳಿಸಿದ್ದಳು. ತನ್ನ ಹೊಟ್ಟೆಯಲ್ಲಿ ಏನೋ “ಹುಳುಗಳು ಹರಿದಾಡುತ್ತಿರುವಂತೆ” ಭಾಸವಾಗುತ್ತಿದೆ ಎಂದು ಅವಳು ಸನ್ನೆ ಮಾಡಿದ್ದಳು. ತಕ್ಷಣ ಆಕೆಯನ್ನು ನಗರದ ಕಾಮಾ ಮತ್ತು ಆಲ್ಬ್ಲೆಸ್ ಆಸ್ಪತ್ರೆಗೆ ದಾಖಲಿಸಿದಾಗ, ಆಕೆ ಐದು ತಿಂಗಳ ಗರ್ಭಿಣಿ ಎಂಬ ಆಘಾತಕಾರಿ ವಿಷಯ ಬಯಲಾಗಿತ್ತು. ವೈದ್ಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಆರಂಭದಲ್ಲಿ ಯುವತಿಯು ಮಾತನಾಡಲು ಅಶಕ್ತಳಾಗಿದ್ದರಿಂದ ಮತ್ತು ಹೇಳಿಕೆ ನೀಡಲು ಭಯಪಡುತ್ತಿದ್ದರಿಂದ ಪೊಲೀಸರಿಗೆ ತನಿಖೆ ನಡೆಸಲು ಕಷ್ಟವಾಗಿತ್ತು. ಇದೇ ಸಂದರ್ಭದಲ್ಲಿ ಪೊಲೀಸರು ಯುವತಿಯ ತಂದೆಯನ್ನು ವಿಚಾರಿಸಿದಾಗ, ಆತ ಅತ್ಯಾಚಾರದ ಸಾಧ್ಯತೆಯನ್ನು ತಳ್ಳಿಹಾಕಿದ್ದಲ್ಲದೆ, ತನ್ನ ಮಗಳು ಗರ್ಭಿಣಿಯಾದ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಉತ್ತರ ನೀಡಿದ್ದ. ಅಷ್ಟೇ ಅಲ್ಲದೆ, ಈ ಬಗ್ಗೆ ದೂರು ದಾಖಲಿಸಲು ಸಹ ಆತ ನಿರಾಕರಿಸಿದ್ದ. ಆದರೆ, ಪೊಲೀಸರು ಯುವತಿಗೆ ಆಪ್ತಸಮಾಲೋಚನೆ ನಡೆಸಿದ ನಂತರ ಆಕೆ ದೂರು ನೀಡಲು ಒಪ್ಪಿಕೊಂಡಿದ್ದಳು.
17 ಮಂದಿಯ ಡಿಎನ್‌ಎ ಪರೀಕ್ಷೆ ಮತ್ತು ಸತ್ಯದ ದರ್ಶನ
ಯುವತಿಯು ನೀಡಿದ ಅಸ್ಪಷ್ಟ ಮಾಹಿತಿಯ ಆಧಾರದ ಮೇಲೆ ಪೊಲೀಸರು ಮೊದಲ ಹಂತದಲ್ಲಿ ಒಬ್ಬ ವ್ಯಕ್ತಿ ಮತ್ತು 17 ವರ್ಷದ ಬಾಲಕನನ್ನು ಬಂಧಿಸಿದ್ದರು. ಆದರೆ ಪ್ರಕರಣದ ಆಳವನ್ನು ಅರಿಯಲು ಪೊಲೀಸರು ಒಟ್ಟು 17 ಶಂಕಿತರ ರಕ್ತದ ಮಾದರಿ ಮತ್ತು ಡಿಎನ್‌ಎ ಸಂಗ್ರಹಿಸಿದ್ದರು. ಜನವರಿ 27 ರಂದು ಬಂದ ಪ್ರಯೋಗಾಲಯದ ವರದಿಯು ಪೊಲೀಸರನ್ನೇ ಬೆಚ್ಚಿಬೀಳಿಸಿತ್ತು. ಹದಿನೇಳು ಮಂದಿಯ ಪೈಕಿ ಕೇವಲ ಯುವತಿಯ ತಂದೆಯ ಡಿಎನ್‌ಎ ಮಾತ್ರ ಭ್ರೂಣದ ಡಿಎನ್‌ಎ ಜೊತೆಗೆ ಹೊಂದಾಣಿಕೆಯಾಗಿತ್ತು. ಅಂದರೆ, ಆಕೆಯ ಹೆತ್ತ ತಂದೆಯೇ ಆಕೆಯ ಮೇಲೆ ನಿರಂತರ ಅತ್ಯಾಚಾರ ಎಸಗಿ ಗರ್ಭಿಣಿಯನ್ನಾಗಿಸಿದ್ದ. ವಿಷಯ ಬಯಲಾಗುತ್ತಿದ್ದಂತೆ, ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಳೆದ ವರ್ಷದ ಮಾರ್ಚ್‌ನಿಂದ ಸೆಪ್ಟೆಂಬರ್ 21ರ ನಡುವಿನ ಅವಧಿಯಲ್ಲಿ ಈ ಘೋರ ಕೃತ್ಯ ನಡೆದಿದೆ. ಸೆಪ್ಟೆಂಬರ್ 22 ರಂದು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ಈಗ ಪಾಪಿ ತಂದೆಯನ್ನು ಈಗ ಜೈಲಿಗಟ್ಟಿದ್ದಾರೆ. ಈ ಪ್ರಕರಣದಲ್ಲಿ ಇತರೆ ವ್ಯಕ್ತಿಗಳ ಪಾತ್ರವಿದೆಯೇ ಎಂಬ ಬಗ್ಗೆಯೂ ತನಿಖೆ ಮುಂದುವರಿದಿದೆ.
ಇದನ್ನೂ ಓದಿ : ಬೆಳಗಾವಿ | ಅಸಲಿ ಪತ್ರಕರ್ತರ ಸೋಗಿನಲ್ಲಿ ಮಹಿಳಾ ಅಧಿಕಾರಿಗೆ ಬ್ಲ್ಯಾಕ್‌ಮೇಲ್.. ಖದೀಮರ ಹೆಡೆಮುರಿ ಕಟ್ಟಿದ ಖಾಕಿ!



















