ಚೆನ್ನೈ: ತಮಿಳುನಾಡಿನ 51ನೇ ರಾಜ್ಯಮಟ್ಟದ ಶೂಟಿಂಗ್ ಕ್ರೀಡಾಕೂಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ ಮುಜುಗರದ ಪ್ರಸಂಗವೊಂದು ಎದುರಾಗಿದೆ. ತಮಿಳುನಾಡು ಕೈಗಾರಿಕಾ ಸಚಿವ ಟಿ.ಆರ್.ಬಿ ರಾಜಾ ಅವರ ಪುತ್ರ ಸೂರ್ಯಾ ರಾಜಾ ಬಾಲು ಅವರು ಅಣ್ಣಾಮಲೈ ಅವರಿಂದ ಕೊರಳಿಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ ಘಟನೆ ನಡೆದಿದೆ. ತಮ್ಮ ಕೊರಳಿಗೆ ಪದಕ ಹಾಕಲು ಅಣ್ಣಾಮಲೈ ಮುಂದಾದಾಗ ಅದನ್ನು ನಿರಾಕರಿಸಿ, ಕೇವಲ ಕೈಯಿಂದ ಅದನ್ನು ಸ್ವೀಕರಿಸಿದ್ದಾರೆ.
ಈ ಕ್ರೀಡಾಕೂಟಕ್ಕೆ ಮುಖ್ಯ ಅತಿಥಿಯಾಗಿ ಅಣ್ಣಾಮಲೈ ಅವರನ್ನು ಆಹ್ವಾನಿಸಲಾಗಿತ್ತು. ಸಮಾರಂಭದ ಭಾಗವಾಗಿ ಅವರು ವಿಜೇತರಿಗೆ ಪದಕಗಳನ್ನು ಪ್ರದಾನ ಮಾಡುತ್ತಿದ್ದರು. ಆದರೆ, ಸೂರ್ಯಾ ಅವರು ಪದಕವನ್ನು ಕೊರಳಿಗೆ ಹಾಕಿಸಿಕೊಳ್ಳಲು ನಿರಾಕರಿಸಿರುವುದು ಎಲ್ಲರ ಗಮನ ಸೆಳೆದಿದೆ.
ಎರಡು ವಾರಗಳ ಹಿಂದಷ್ಟೇ ತಮಿಳುನಾಡಿನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32ನೇ ಘಟಿಕೋತ್ಸವದಲ್ಲಿ, ಡಾಕ್ಟರೇಟ್ ಪದವಿ ವಿದ್ಯಾರ್ಥಿನಿ ಜೀನ್ ಜೋಸೆಫ್ ಅವರು ವೇದಿಕೆಯ ಮೇಲೆ ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪದವಿ ಪಡೆಯದೇ, ಅವರನ್ನು ದಾಟಿ ಮುಂದೆ ಸಾಗಿ, ಕುಲಪತಿಗಳಿಂದ ಪದವಿ ಸ್ವೀಕರಿಸಿದ್ದರು.
ಡಿಎಂಕೆ ಪಕ್ಷದ ನಾಗರಕೋಯಿಲ್ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿಯಾದ ಜೋಸೆಫ್ ಅವರು, ರಾಜ್ಯಪಾಲರ “ತಮಿಳು ಮತ್ತು ತಮಿಳುನಾಡು ವಿರೋಧಿ” ನಿಲುವನ್ನು ವಿರೋಧಿಸಿ ಈ ರೀತಿ ಮಾಡಿದ್ದಾಗಿ ನಂತರ ಸ್ಪಷ್ಟಪಡಿಸಿದ್ದರು. “ನಾನು ದ್ರಾವಿಡ ಮಾದರಿಯಲ್ಲಿ ನಂಬಿಕೆ ಇಟ್ಟವಳು, ಹಾಗಾಗಿ ಕುಲಪತಿಗಳಿಂದಲೇ ಪದವಿ ಸ್ವೀಕರಿಸಲು ನಿರ್ಧರಿಸಿದೆ” ಎಂದು ಅವರು ಹೇಳಿದ್ದರು.
ವಿಶೇಷವೆಂದರೆ, ಆ ಘಟನೆಯನ್ನು ಖಂಡಿಸಿದ್ದ ಅಣ್ಣಾಮಲೈ, “ಪ್ರಚಾರಕ್ಕಾಗಿ ಡಿಎಂಕೆ ಸದಸ್ಯರು ನಡೆಸಿದ ಹೀನ ನಾಟಕವಿದು. ಶಾಲೆ ಮತ್ತು ವಿಶ್ವವಿದ್ಯಾಲಯಗಳಿಗೆ ಕೀಳುಮಟ್ಟದ ರಾಜಕೀಯವನ್ನು ತರಬಾರದು” ಎಂದು ಎಚ್ಚರಿಕೆ ನೀಡಿದ್ದರು. ಇದೀಗ ಅವರಿಗೇ ಅಂತಹುದೇ ಪರಿಸ್ಥಿತಿ ಎದುರಾಗಿದೆ.