ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವೃದ್ಧ ದಂಪತಿಯ ಮೇಲೆ ರಾಜ್ಯ ನಾಯಕನೊಬ್ಬ ಪುಂಡಾಟ ಮೆರೆದಿರುವ ಘಟನೆ ವರದಿಯಾಗಿದೆ.
ಡಿಕೆಶಿಯ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ರಾಜ್ಯ ನಾಯಕ 73 ವರ್ಷದ ವೃದ್ಧ ದಂಪತಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ. ವೃದ್ಧ ರಮೇಶ್ ಭಟ್ ಹಾಗೂ ವಾಣಿ ದಂಪತಿ ಮೇಲೆ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಕೊಪ್ಪ ತಾಲೂಕಿನ ಬೇರುಕೂಡಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಎಂಬುವವರೇ ವೃದ್ಧರ ಮೇಲೆ ದರ್ಪ ಮೆರೆದ ನಾಯಕ ಎನ್ನಲಾಗಿದೆ.
ಸಚಿನ್, ರಮೇಶ್ ಭಟ್ ಅವರಿಂದ 5.25 ಎಕರೆ ಜಾಗವನ್ನು ಖರೀದಿಸಿದ್ದರು. ಖರೀದಿಸಿದ ನಂತರ ಹಣವನ್ನೂ ನೀಡಿದ್ದರು. ಆದರೆ, ಈಗ ವೃದ್ಧರಿರುವ ಮನೆಯನ್ನೂ ಖಾಲಿ ಮಾಡುವಂತೆ ಹಿಂಸೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವೃದ್ಧ ದಂಪತಿ ಕೇವಲ ಭೂಮಿಯನ್ನು ಮಾತ್ರ ಮಾರಾಟ ಮಾಡಿದ್ದರು. ಮನೆ ಮಾರಾಟ ಮಾಡಿರಲಿಲ್ಲ. ಆದರೆ, ಈಗ ಸಚಿನ್ ಮನೆಯನ್ನೂ ಖಾಲಿ ಮಾಡುವಂತೆ ಒತ್ತಡ ಹಾಕಿ, ದಬ್ಬಾಳಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಸಚಿನ್ ಹಾಗೂ ಆತನ ಸಂಗಡಿಗರು, ಮನೆಯ ಬಾಗಿಲು-ಗೇಟ್ ಮುರಿದು, ನೀರಿನ ಮೋಟರ್, ವಿದ್ಯುತ್ ಮೀಟರ್ ಬೋರ್ಡ್ ಕಿತ್ತು ಹಾಕಿ ದೌರ್ಜನ್ಯ ಮೆರೆದಿದ್ದಾರೆ. ಹೀಗಾಗಿ ವೃದ್ಧ ದಂಪತಿ ಕಳೆದ ನಾಲ್ಕೈದು ದಿನಗಳಿಂದಲೂ ಕತ್ತಲಲ್ಲೇ ವಾಸಿಸುತ್ತಿದ್ದಾರೆ. ಈ ಕುರಿತು ವೃದ್ಧ ದಂಪತಿ ಕೊಪ್ಪ ಡಿವೈಎಸ್ಪಿ ಕಚೇರಿಯಲ್ಲಿ ದೂರು ನೀಡಿದ್ದಾರೆ. ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.