ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಜಿಎಸ್ ಟಿಯ ಸ್ಲ್ಯಾಬ್ ಗಳನ್ನು ಇಳಿಕೆ ಮಾಡುವ ದೇಶದ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಕೇಂದ್ರ ಸರ್ಕಾರವೀಗ ರೈಲ್ವೆ ಇಲಾಖೆಯ ಸುಮಾರು 11 ಲಕ್ಷ ಉದ್ಯೋಗಿಗಳಿಗೆ ಶುಭ ಸುದ್ದಿ ನೀಡಿದೆ. ಹೌದು, ರೈಲ್ವೆ ನೌಕರರಿಗೆ ದೀಪಾವಳಿ ಬೋನಸ್ ನೀಡಲು ಕೇಂದ್ರ ಸರ್ಕಾರ 1,865 ಕೋಟಿ ರೂ. ಬಿಡುಗಡೆ ಮಾಡಲು ಅನುಮೋದನೆ ನೀಡಿದೆ. ಇದರಿಂದ ನೌಕರರ ಹಬ್ಬದ ಸಂಭ್ರಮವು ಜಾಸ್ತಿಯಾಗಿದೆ.
ಕೇಂದ್ರ ಸರ್ಕಾರವು ನೌಕರರ ಉತ್ಪಾದನೆ ಆಧಾರಿತ ಬೋನಸ್ ನೀಡಲು ಅನುಮೋದನೆ ನೀಡಿದೆ. ರೈಲ್ವೆ ಇಲಾಖೆಯ 10.91 ಲಕ್ಷ ನೌಕರರಿಗೆ ಗರಿಷ್ಠ 17,951 ರೂಪಾಯಿವರೆಗೆ ಬೋನಸ್ ದೊರೆಯಲಿದೆ. ನೌಕರರ ಕಾರ್ಯಕ್ಷಮತೆ ಆಧಾರದ ಮೇಲೆ ಬೋನಸ್ ನಿಗದಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ಟ್ರ್ಯಾಕ್ ಮೆಂಟೇನರ್ ಗಳು, ಲೋಕೋ ಪೈಲಟ್ ಗಳು, ಟ್ರೇನ್ ಮ್ಯಾನೇಜರ್ ಗಳು, ಸ್ಟೇಷನ್ ಮಾಸ್ಟರ್ಸ್, ಸೂಪರ್ ವೈಸರ್ಸ್, ಟೆಕ್ನಿಶಿಯನ್ಸ್ ಸೇರಿ ಸಿ ದರ್ಜೆಯ ನೌಕರರು ಕೂಡ ಬೋನಸ್ ಪಡೆಯಲಿದ್ದಾರೆ. ಪ್ರತಿ ವರ್ಷ ಕೇಂದ್ರ ಸರ್ಕಾರವು ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ರೈಲ್ವೆ ನೌಕರರಿಗೆ ಬೋನಸ್ ಘೋಷಣೆ ಮಾಡುತ್ತದೆ. ಅದರಂತೆ ಈ ಬಾರಿಯೂ ಬೋನಸ್ ಘೋಷಿಸಿದೆ.
ರೈಲ್ವೆ ಇಲಾಖೆ ನೌಕರರ 78 ದಿನಗಳ ಲೆಕ್ಕಾಚಾರದಲ್ಲಿ ಬೋನಸ್ ನಿಗದಿಪಡಿಸಲಾಗುತ್ತದೆ. ನೌಕರರ ಹುದ್ದೆ, ಕಾರ್ಯಕ್ಷಮತೆ ಆಧಾರದ ಮೇಲೆ 17,951 ರೂಪಾಯಿವರೆಗೆ ಬೋನಸ್ ನೀಡಲಾಗುತ್ತದೆ ಎಂದು ತಿಳಿದುಬಂದಿದೆ. ಇನ್ನು, ಕೇಂದ್ರ ಸರ್ಕಾರಿ ನೌಕರರು ಕೂಡ ತುಟ್ಟಿ ಭತ್ಯೆ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ. ದೀಪಾವಳಿಗೆ ಮುನ್ನವೇ ಘೋಷಣೆ ಮಾಡುವ ಸಾಧ್ಯತೆ ಇದೆ.