ಬೆಂಗಳೂರು: ರಾಜ್ಯದ ಜನರು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಆದರೆ, ಪಟಾಕಿಯಿಂದ ದೂರ ಇರಿ ಎಂದು ಹೇಳಿದರೂ ಜನರು ಮಾತ್ರ ಪಟಾಕಿ ಸಿಡಿಸಿ ಗಾಯಗೊಂಡಿದ್ದಾರೆ. ಕಳೆದ ಬಾರಿಗಿಂತಲೂ ಈ ಬಾರಿ ಗಾಯಗೊಂಡವರ ಸಂಖ್ಯೆ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಇಲ್ಲಿಯವರೆಗೆ 115 ಜನರು ಪಟಾಕಿಯಿಂದ ಗಾಯಗೊಂಡಿದ್ದಾರೆ. ಮಿಂಟೋ ಹಾಗೂ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಒಟ್ಟು 115 ಪ್ರಕರಣಗಳು ದಾಖಲಾಗಿವೆ. ನಾರಾಯಣ ನೇತ್ರಾಲಯ ಆಸ್ಪತ್ರೆ ಒಂದರಲ್ಲೇ ಮೂರು ದಿನದಲ್ಲಿ 66 ಕೇಸ್ಗಳು ದಾಖಲಾಗಿವೆ. ಇದರಲ್ಲಿ 49 ಗಂಡು ಮಕ್ಕಳು, 17 ಹೆಣ್ಣು ಮಕ್ಕಳಿದ್ದಾರೆ. 33 ಜನ ವಯಸ್ಕರಿಗೆ, 33 ಜನ ಮಕ್ಕಳಿಗೆ ಪಟಾಕಿ ಕಿಡಿ ಸಿಡಿದು ಗಾಯಗೊಂಡಿದ್ದಾರೆ. ಈ ಬಾರಿ ಮಕ್ಕಳೇ ಹೆಚ್ಚಾಗಿ ಗಾಯಗೊಂಡಿದ್ದಾರೆ.
ಮಿಂಟೋ ಆಸ್ಪತ್ರಗೆ ಇಲ್ಲಿಯವರೆಗೆ 49 ಜನರು ದಾಖಲಾಗಿದ್ದಾರೆ. 49ರಲ್ಲಿ 27 ಮಂದಿ ಪಟಾಕಿ ಸಿಡಿಸುವಾಗ ಗಾಯ ಮಾಡಿಕೊಂಡಿದ್ದಾರೆ. 22 ಮಂದಿ ಅಕ್ಕಪಕ್ಕ ಇದ್ದವರು ಪಟಾಕಿ ಸಿಡಿತಕ್ಕೆ ಒಳಗಾಗಿದ್ದಾರೆ. ಅಲ್ಲದೇ, ಹಲವರಿಗೆ ಶಸ್ತ್ರ ಚಿಕಿತ್ಸೆ ಕೂಡ ಆಗಿದೆ. ಹೀಗಾಗಿ ಇನ್ನಾದರೂ ಜನರು ಎಚ್ಚೆತ್ತುಕೊಳ್ಳಲಿ ಎಂದು ವೈದ್ಯರು ಕಿವಿ ಮಾತು ಹೇಳುತ್ತಿದ್ದಾರೆ.