ಮಂಗಳೂರು : ತೆಂಕುತಿಟ್ಟು ಯಕ್ಷಗಾನದ ಖ್ಯಾತ ಹಿರಿಯ ಭಾಗವತ ‘ರಸರಾಗ ಚಕ್ರವರ್ತಿ’ ದಿನೇಶ್ ಅಮ್ಮಣ್ಣಾಯ (65) ಬೆಳ್ತಂಗಡಿಯ ಅರಸಿನಮಕ್ಕಿಯ ಸ್ವಗೃಹದಲ್ಲಿ ಇಂದು (ಗುರುವಾರ,ಅ.16) ವಿಧಿವಶರಾಗಿದ್ದಾರೆ.
ತಮ್ಮ ಕಂಚಿನ ಕಂಠ ಹಾಗೂ ವಿಶಿಷ್ಟ ರಾಗ ಸಂಯೋಜನೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಲಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರ ಅಗಲಿಕೆಯಿಂದ ಯಕ್ಷಗಾನ ಲೋಕಕ್ಕೆ ಭಾರಿ ನಷ್ಟವಾಗಿದೆ.
ತೆಂಕುತಿಟ್ಟು ಯಕ್ಷಗಾನ ಪರಂಪರೆಯ ಹಿರಿಯ ಭಾಗವತರಾಗಿ ನಾಲ್ಕು ದಶಕಕ್ಕೂ ಹೆಚ್ಚು ಕಾಲ ಕಲಾ ಸೇವೆ ಸಲ್ಲಿಸಿದ್ದ ಅಮ್ಮಣ್ಣಾಯ ‘ರಸರಾಗ ಚಕ್ರವರ್ತಿ’ ಎಂಬ ಬಿರುದು ಹೊಂದಿದ್ದರು. ದಾಮೋದರ ಮಂಡೆಚ್ಚರ ಗರಡಿಯಲ್ಲಿ ಆರಂಭದಲ್ಲಿ ಪುತ್ತೂರು ಮೇಳದಲ್ಲಿ ಚಂಡೆ ಮತ್ತು ಮದ್ದಳೆ ವಾದಕರಾಗಿ ಯಕ್ಷಗಾನ ಲೋಕಕ್ಕೆ ಕಾಲಿಟ್ಟ ಇವರು ನಂತರ ಭಾಗವತಿಕೆಯತ್ತ ಆಸಕ್ತಿ ಬೆಳೆಸಿ ಪ್ರಖ್ಯಾತ ಭಾಗವತರಾಗಿ ಹೊರಹೊಮ್ಮಿದ್ದರು.
ಪ್ರಸಿದ್ಧ ಡೇರೆ ಮೇಳವಾಗಿದ್ದ ಕರ್ನಾಟಕ ಮೇಳದಲ್ಲಿ ದಿಗ್ಗಜ ಕಲಾವಿದರನ್ನು ರಂಗದಲ್ಲಿ ಕುಣಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ತುಳು ಪ್ರಸಂಗಗಳಿಗೆ ತನ್ನ ಕಂಠ ಮಾಧುರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ತಮ್ಮ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ.