ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ರೊಂದಿಗೆ ಜಟಾಪಟಿ ನಡೆಸಿದ್ದ ಉದ್ಯಮಿ ಮೋಹನ್ ದಾಸ್ ಪೈ, ಇಂದು ಡಿಸಿಎ ಡಿ.ಕೆ. ಶಿವಕುಮಾರ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಅವರು, ನಾವು ಬೆಂಗಳೂರು ಉಸ್ತುವಾರಿ ಸಚಿವರೊಂದಿಗೆ ನಗರದ ಅಭಿವೃದ್ಧಿ ಕುರಿತು ಚರ್ಚೆ ಮಾಡಿದ್ದೇವೆ. ಡಿಕೆಶಿ ಬೆಂಗಳೂರು ಹೀರೋ ಆಗಬೇಕು. ಬೆಂಗಳೂರು ಅಭಿವೃದ್ಧಿ ಆಗಬೇಕು. ಬೆಂಗಳೂರು ಉತ್ತಮ ನಗರ, ಗ್ಲೋಬಲ್ ಸಿಟಿ, ಸೈನ್ಸ್ ಸಿಟಿ. ಹೀಗಾಗಿ ಬೆಂಗಳೂರು ಅಭಿವೃದ್ಧಿ ಹೊಂದಬೇಕು. ಫುಟ್ ಪಾತ್, ರಸ್ತೆ, ಮೆಟ್ರೋ ಅಭಿವೃದ್ಧಿ ಆಗಬೇಕು. ಈ ಕುರಿತು ನಾವು ಮನವಿ ಮಾಡಿದ್ದೇವೆ.
ಕೇವಲ 6 ತಿಂಗಳಲ್ಲಿ ನಗರವನ್ನು ಅಭಿವೃದ್ಧಿ ಮಾಡುತ್ತೇವೆ ಎಂದು ಡಿಸಿಎಂ ಭರವಸೆ ನೀಡಿದ್ದಾರೆ. ಅವರು ಸಮಸ್ಯೆ ಬಗೆಹರಿಸುತ್ತಾರೆಂಬ ಭರವಸೆ ಇದೆ. ಹೀಗಾಗಿ ನಾವು ಸಮಸ್ಯೆಗಳ ಕುರಿತು ಅವರಿಗೆ ಮನವರಿಕೆ ಮಾಡಿದ್ದೇವೆ. ಕೆಲವರು ಪಾಸಿಟಿವ್ ಆಗಿ ತೆಗೆದುಕೊಳ್ಳುತ್ತಾರೆ. ಕೆಲವರು ಅದನ್ನೇ ಟೀಕೆ ಮಾಡುತ್ತಾರೆ. ಭಾರತದಲ್ಲಿ ಯಾವುದೇ ಸಿಟಿಯಲ್ಲಿ ಅಭಿವೃದ್ಧಿ ಬಗ್ಗೆ ಕೇಳಲ್ಲ. ನಾವು ಹೇಳಿದರೆ, ಕರೆದು ಅಭಿಪ್ರಾಯ ಪಡೆಯುತ್ತಾರೆ. ಇಷ್ಟು ಸಾಮರಸ್ಯ ಬೇರೆ ಯಾವ ಸಿಟಿಯಲ್ಲೂ ಇಲ್ಲ. ಕನ್ನಡಿಗರಿಗೆ ಒಳ್ಳೆಯ ಕೆಲಸ ಸಿಗಬೇಕು. ಹೀಗಾಗಿ ಬೆಂಗಳೂರು ಅಭಿವೃದ್ಧಿ ಆಗಬೇಕು ಎಂದಿದ್ದಾರೆ.
ಬೊಮ್ಮಾಯಿ ಸರ್ಕಾರ ಇದ್ದ ಸಂದರ್ಭದಲ್ಲಿ ನಾನು ಕೂಡ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದೆ. ಎಲ್ಲ ಸರ್ಕಾರ ಇದ್ದಾಗ ಮಾತನಾಡಿದ್ದೇನೆ. ಎಲ್ಲ ಸಿಎಂಗಳು ನನ್ನನ್ನು ಕರೆದು ಅಭಿಪ್ರಾಯ ಪಡೆದಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ಗಮನ ಸೆಳೆದಿದೆ. ಬೇರೆ ಕಡೆ ನಾವು ಬೆಂಗಳೂರು ಬಗ್ಗೆ ಮಾತನಾಡಿದ್ದೇವೆ. ನಮಗೆ ಬೇರೆ ಸಿಟಿಗಳ ಅಭಿವೃದ್ಧಿ ಬಗ್ಗೆ ಬೇಕಾಗಿಲ್ಲ. ಬೆಂಗಳೂರು ಅಭಿವೃದ್ಧಿ ಬೇಕು ಎಂದಿದ್ದಾರೆ.