ಬೈಂದೂರು : ಉಪ್ಪುಂದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತು ಸ್ವೀಕರಿಸಿದ್ದ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಜಿಟಲ್ ಕ್ಲಾಸ್ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು.
ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಡಿಜಿಟಲ್ ಕ್ಲಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಶಾಲೆಯ ಉಳಿಸುವ ನಿಟ್ಟಿನಲ್ಲಿ ಬಿಜೂರಿನ ಕಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಗೋವಿಂದ ಬಾಬು ಪೂಜಾರಿ, ತಾನು ಕಲಿತ ಶಾಲೆಯ ಮಕ್ಕಳಿಗೆ ಅನುಕೂಲ ಮಾಡಲು ಈ ರೀತಿ ಮಹತ್ತರ ಕಾರ್ಯಕ್ಕೆ ಕೈ ಹಾಕಿರುವುದು ಹೆಮ್ಮೆಯ ಸಂಗತಿ. ಉತ್ತಮ ಶಿಕ್ಷಣವನ್ನು ನೀಡಬೇಕೆಂಬ ಸದುದ್ದೇಶದಿಂದ ಇಂದು ಸ್ಮಾರ್ಟ್ ಕ್ಲಾಸ್ ನೀಡುವ ಮೂಲಕ ಶಾಲೆಯ ಅಭಿವೃದ್ಧಿಗೆ ಉತ್ತಮ ರೀತಿಯಲ್ಲಿ ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯು ಮಾದರಿ ಶಾಲೆಯಾಗಿ ಬದಲಾವಣೆಯಾಗಲಿ ಎಂದು ಹಾರೈಸಿದ್ದಾರೆ.
ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಕಲಿತ ಶಾಲೆಗೆ ಇಂತಹ ಸೇವೆಯನ್ನು ಸಲ್ಲಿಸಿದಾಗ ಇದರಿಂದ ಮಕ್ಕಳಿಗೆ ತುಂಬಾ ಉಪಯುಕ್ತವಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗಾಗಿ ಇನ್ನಷ್ಟು ಸೇವೆ ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ, ಗ್ರಾಮ ಪಂಚಾಯತ್ ಸದಸ್ಯರಾದ, ರಮೇಶ್ ದೇವಾಡಿಗ, ರಾಜೇಂದ್ರ ಬಿಜೂರು, ಖಂಬದಕೋಣೆ ಸಂದೀಪ್, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವೇಶ್ವರ ಅಡಿಗ, ಎಸ್ ಡಿಎಂಸಿ ಅಧ್ಯಕ್ಷಎ ಶಾರದಾ ದೇವಾಡಿಗ, ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ವರಲಕ್ಷ್ಮಿ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿರ್ದೇಶಕ ಜಯರಾಮ ಶೆಟ್ಟಿ ಇದ್ದರು. ಶಿಕ್ಷಕಿ ಕವಿತಾ ಸ್ವಾಗತಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನಿ ವಂದಿಸಿದರು.