ಬೆಂಗಳೂರು: ಚಂದನವನದ ನಟ ಹಾಗೂ ದೊಡ್ಮನೆ ಕುಡಿ ಯುವರಾಜ್ ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಸಂಸಾರದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಇತ್ತೀಚೆಗಷ್ಟೇ ಸಿಂಗರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪರಸ್ಪರ ಒಪ್ಪಿ ಡಿವೋರ್ಸ್ ಪಡೆದಿದ್ದರು. ಈ ಸುದ್ದಿ ಮಾಸುವ ಮುನ್ನವೇ ಈಗ ದೊಡ್ಮನೆಯಲ್ಲಿಯೂ ವಿಚ್ಛೇದನದ ಸುದ್ದಿ ಸದ್ದು ಮಾಡುತ್ತಿದೆ.
ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಇಬ್ಬರೂ ಬೇರೆ ಬೇರೆಯಾಗಿದ್ದು ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ರಾಘವೇಂದ್ರ ರಾಜ್‌ಕುಮಾರ್ ಅವರ ಕಿರಿಯ ಪುತ್ರನಾಗಿರುವ ಯುವ ರಾಜ್ ಕುಮಾರ್ ಮೈಸೂರು ಮೂಲದ ಶ್ರೀದೇವಿ ಭೈರಪ್ಪ ಎಂಬುವವರನ್ನು ಪ್ರೀತಿಸಿ ವಿವಾಹವಾಗಿದ್ದರು. 2019ರಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಸದ್ಯ ಇಬ್ಬರ ಮಧ್ಯೆ ವೈಮನಸ್ಸು ಉಂಟಾಗಿದ್ದು, ಬೇರೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಶ್ರೀದೇವಿ 6 ತಿಂಗಳಿಂದ ದೊಡ್ಮನೆ ಕುಟುಂಬದಿಂದ ದೂರ ಉಳಿದಿದ್ದಾರೆ. ಶ್ರೀದೇವಿ ರಾಜ್ ಅಕಾಡೆಮಿಯ ರುವಾರಿಯಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಎರಡೂ ಕುಟುಂಬಸ್ಥರು ನಡೆಸಿರುವ ಸಂಧಾನಕ್ಕೂ ದಂಪತಿ ಒಪ್ಪಿಲ್ಲ ಎಂದು ತಿಳಿದು ಬಂದಿದೆ.

