ಉಡುಪಿ: ಉಡುಪಿಯಲ್ಲಿ ಅಧಿಕಾರಿಗಳು ಅಕ್ರಮ ಎಸಗಿದ್ದಾರೆ ಎನ್ನುವಂತಹ ಆರೋಪ ಕೇಳಿ ಬರುತ್ತಿದೆ. ಜಿಲ್ಲೆಯ ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಿದ್ದಾರೆ ಎಂದು ಸ್ಥಳೀಯರು, ಸಾಮಾಜಿಕ ಹೋರಾಟಗಾರರು ದೂರು ದಾಖಲಿಸಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರವಿದ್ದು, ಇದರ ಮೂಲ ಉದ್ದೇಶ ಕೃಷಿ ವಿಷಯದಲ್ಲಿ ಸಂಶೋಧನೆಗಳನ್ನು ಮಾಡಿ ರೈತರಿಗೆ ನೆರವಾಗುವುದು. ಆದರೆ ಸಂಶೋಧನೆ ಬದಲು ಮರಗಳ ಸಂಹಾರ ನಡೆಯುತ್ತಾ ಇದೆ ಎನ್ನುವಂತಹ ಆರೋಪ ಕೇಳಿ ಬಂದಿದೆ. ಸರಿ ಸುಮಾರು 400 ಎಕ್ರೆ ಪ್ರದೇಶವನ್ನು ಹೊಂದಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಲವು ಬೆಳೆಬಾಳುವ ಮರಗಳಿದ್ದು, ಅವುಗಳ ಬುಡಕ್ಕೆ ಕೊಡಲಿ ಪೆಟ್ಟನ್ನು ನೀಡಿದ್ದಾರೆ ಎಂದು ಸ್ಥಳೀಯರು ದೂರನ್ನು ದಾಖಲಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಹೋರಾಟಗಾರರು ನೀಡಿದ ಮಾಹಿತಿಯ ಪ್ರಕಾರ ಇದು ಇಂದು ನಿನ್ನಯದಲ್ಲ ಕಳೆದ ಹಲವು ಸಮಯಗಳಿಂದ ನಡಿತಾ ಇದೆ. ಈಗಾಗಲೇ ನೂರಾರು ಲೋಡ್ ಮರಗಳನ್ನು ಕಡಿದು ಅಕ್ರಮವಾಗಿ ಇಲ್ಲಿನ ಅಧಿಕಾರಿಗಳು ಸಾಗಿಸಿದ್ದಾರೆ. ಪ್ರಕರಣ ದಾಖಲಿಸಿ ಅರಣ್ಯ ಅಧಿಕಾರಿಗಳು ಬರುವ ವೇಳೆಗಾಗಲೇ ಕಡಿದಂತಹ 80 ಪ್ರತಿಶತ ಮರಗಳನ್ನು ಮಾರಾಟ ಮಾಡಿದ್ದಾರೆ. ಉಳಿದಂತಹ 20 ಪ್ರತಿಶತ ಮರಗಳನ್ನು ಇದೀಗ ಸಂಬಂಧಪಟ್ಟ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಮರ ಕಡಿದ ಹೈದರ್ ಎನ್ನುವಂತಹ ವ್ಯಕ್ತಿಯನ್ನು ಬಂದಿಸಿದ್ದು, ಇಲ್ಲಿನ ಅಧಿಕಾರಿಗಳು ಆತನ ಮೇಲೆ ಸಂಪೂರ್ಣ ಆರೋಪವನ್ನು ಹಾಕಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಕಾರ್ಯ ತಂತ್ರವನ್ನು ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕೃಷಿ ಅಧಿಕಾರಿಗಳ ಜೊತೆ ಅರಣ್ಯಾಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಮರ ಮಾರಾಟ ಮಾಡಿದ್ದ ಬಗ್ಗೆ ತನಿಖೆ ಮಾಡಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಸಾಮಾಜಿಕ ಹೋರಾಟಗಾರರು ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ | ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಚಾಲಕರಿಂದ 9.62 ಲಕ್ಷ ದಂಡ ವಸೂಲಿ!



















