ಮಾಸ್ಕೋ: ರಷ್ಯಾದ ಕೋಟ್ಯಧಿಪತಿ ದಂಪತಿ ತಮ್ಮ ಮದುವೆಯ ದಿನವೇ ಹೆಪ್ಪುಗಟ್ಟಿ ಸಾವನ್ನಪ್ಪಿದ ದುರ್ಘಟನೆಯೊಂದು ನಡೆದಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಹೇಳಲಾದ ಕಥೆಯ ಪ್ರಕಾರ, ರಷ್ಯಾದ ಕ್ರಯೋಜೆನಿಕ್ಸ್ ಕಂಪನಿಯ ಮಾಲೀಕರಾದ ವಿಕ್ಟರ್ ಮತ್ತು ಎಲೆನಾ ಪೆಟ್ರೋವ್ ಎಂಬ ಟೆಕ್ ಬಿಲಿಯನೇರ್ ದಂಪತಿ, ತಮ್ಮ ಮದುವೆಯನ್ನು ವಿಶೇಷವಾಗಿಸಲು ನಿರ್ಧರಿಸಿದ್ದರು. ಅದರಂತೆ ಅವರು ತಮ್ಮ ಮದುವೆಯ ಉಡುಗೆಯೊಳಗೆ ‘ದ್ರವ ಸಾರಜನಕ ವ್ಯವಸ್ಥೆ’ (liquid nitrogen system) ಅಳವಡಿಸಿಕೊಂಡು ಮದುವೆ ಮಂಟಪಕ್ಕೆ ಬಂದಿದ್ದರು. ಮಾಸ್ಕೋದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ, ಅವರು ಉಂಗುರ ಬದಲಾಯಿಸಿಕೊಳ್ಳುತ್ತಿದ್ದಂತೆ, ಅವರ ದೇಹದ ಉಷ್ಣತೆ ತೀವ್ರವಾಗಿ ಕುಸಿಯಲಾರಂಭಿಸಿತ್ತು.
ಅಲ್ಲಿ ನೆರೆದಿದ್ದ ಅತಿಥಿಗಳು ಇದನ್ನು ಒಂದು ಶೋ ಇರಬಹುದು ಎಂದೇ ಭಾವಿಸಿದ್ದರು. ಆದರೆ, ಕೆಲವೇ ಕ್ಷಣಗಳಲ್ಲಿ ಎಲೆನಾ ಅವರ ಗೌನ್ ಮೇಲೆ ಮಂಜುಗಡ್ಡೆಯ ಹರಳುಗಳು ಮೂಡಿದವು ಮತ್ತು ವಿಕ್ಟರ್ ಅವರ ನಿಶ್ವಾಸದ ಗಾಳಿಯು ಗಾಳಿಯಲ್ಲಿ ಮೋಡದಂತೆ ಕಾಣಿಸತೊಡಗಿತು. ಅವರ ದೇಹದ ಉಷ್ಣತೆ -196 ಡಿಗ್ರಿ ಸೆಲ್ಸಿಯಸ್ ತಲುಪುತ್ತಿದ್ದಂತೆ, ಇಬ್ಬರೂ ಪರಸ್ಪರ ಚುಂಬಿಸುತ್ತಿರುವಾಗಲೇ ಕುಸಿದುಬಿದ್ದರು.

ವೈದ್ಯಕೀಯ ತಂಡ ತಕ್ಷಣವೇ ಧಾವಿಸಿದರೂ, ಹೆಪ್ಪುಗಟ್ಟಿದ ಅವರ ದೇಹಗಳನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಅವರ ಹೆಪ್ಪುಗಟ್ಟಿದ ಶವಗಳನ್ನು ಇಂದಿಗೂ ಪೆಟ್ರೋವ್ ಇನ್ಸ್ಟಿಟ್ಯೂಟ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದೂ ಈ ಕಥೆ ಹೇಳುತ್ತದೆ.
ಇದು ಸತ್ಯವೇ? ವಾಸ್ತವವೇನು?
ಆದರೆ, ಈ ಘಟನೆಗೆ ಯಾವುದೇ ಅಧಿಕೃತ ಪುರಾವೆಗಳಿಲ್ಲ ಮತ್ತು ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅನೇಕ ಕಟ್ಟುಕಥೆಗಳಲ್ಲಿ ಒಂದು ಎಂಬುದು ಸಾಬೀತಾಗಿದೆ. ಇತ್ತೀಚಿನ ದಿನಗಳಲ್ಲಿ ಎಐ ತಂತ್ರಜ್ಞಾನ ಮತ್ತು ವೈರಲ್ ಕಂಟೆಂಟ್ ಗಳಿಂದಾಗಿ ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆ ಅಳಿಸಿಹೋಗುತ್ತಿದೆ. ಈ ಘಟನೆಯ ಬಗ್ಗೆ ಯಾವುದೇ ಅಧಿಕೃತ ವರದಿಗಳಿಲ್ಲದ ಕಾರಣ, ಇದು ಸಂಪೂರ್ಣವಾಗಿ ಕಾಲ್ಪನಿಕ ಮತ್ತು ಎಐ-ರಚಿತ ವಿಡಿಯೋ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.