ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಈಗ ಎಲ್ಲವನ್ನೂ ತೊರೆದು ವಿದೇಶಕ್ಕೆ ಹಾರಲು ಸಜ್ಜಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ.
ಹೌದು! ಅವರು ಅವರು ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯಕ್ಕೆ ಹೊರಡಲು ಸಿದ್ಧರಾಗಿದ್ದಾರೆ. ಆದರೆ, ಉನ್ನತ ವ್ಯಾಸಂಗದ ನಂತರ ರಾಜಕೀಯದಿಂದ ಸನ್ಯಾಸ ಸ್ವೀಕರಿಸುತ್ತಾರೆ ಎಂದು ನೀವು ಊಹಿಸಿದ್ದರೆ, ಅದು ತಪ್ಪು.
ಯುಕೆ ವಿದೇಶಾಂಗ ಕಚೇರಿ 20 ವರ್ಷಗಳಿಗೂ ಹೆಚ್ಚು ಕಾಲ ಫೆಲೋಶಿಪ್ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿ ವರ್ಷವೂ ಭಾರತದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಕೋರ್ಸ್ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ರಾಜಕೀಯ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದಲ್ಲಿ ನಡೆಯುತ್ತದೆ.
ಮೂರು ತಿಂಗಳ ಕಾಲ ಫೆಲೋಶಿಪ್ ಮುಂದುವರಿಸಲು ಈಗ ಅಣ್ಣಾಮಲೈ ಮುಂದಾಗಿದ್ದಾರೆ. ಅಲ್ಲದೇ, ಈ ಅವಧಿಯಲ್ಲಿ ಪಕ್ಷದ ಚಟುವಟಿಕೆಗಳಿಂದ ತಾತ್ಕಾಲಿಕ ವಿರಾಮ ನೀಡಬೇಕೆಂದು ಅಣ್ಣಾಮಲೈ ಮನವಿ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಅಣ್ಣಾಮಲೈ ಅವರು ತಮ್ಮ ಫೆಲೋಶಿಪ್ ಮುಗಿದ ನಂತರ ಪಕ್ಷದ ಚಟುವಟಿಕೆಗಳಿಗೆ ಮರಳಲಿದ್ದೇನೆ ಎಂದು ಕೂಡ ಖಚಿತಪಡಿಸಿದ್ದಾರೆ. ಒಂದು ತಿಂಗಳ ಹಿಂದೆ ಅಣ್ಣಾಮಲೈ ಫೆಲೋಶಿಪ್ ಗೆ ಆಯ್ಕೆಯಾಗಿದ್ದರೂ ಅನುಮತಿಗಾಗಿ ಕಾಯುತ್ತಿದ್ದರು. ಆಗಸ್ಟ್ 5 ರಂದು ಅಣ್ಣಾಮಲೈ ಅವರು ನವದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಉನ್ನತಾಧಿಕಾರಿಗಳಿಂದ ಒಪ್ಪಿಗೆ ಸಿಕ್ಕಿದೆ. ಭಾರತೀಯ ಪೊಲೀಸ್ ಸೇವೆಯ ಮಾಜಿ ಅಧಿಕಾರಿ ಅಣ್ಣಾಮಲೈ ಅವರು ಮೂರು ವರ್ಷಗಳಿಂದ ತಮಿಳುನಾಡಿನಲ್ಲಿ ಬಿಜೆಪಿ ಮುನ್ನಡೆಸಿದ್ದಾರೆ. ಈ ಹಿಂದೆ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಜೊತೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಪಕ್ಷದ ಪ್ರಚಾರದ ಚುಕ್ಕಾಣಿ ಹಿಡಿದಿದ್ದರು. ಆದರೆ ಬಿಜೆಪಿ ಯಾವುದೇ ಸ್ಥಾನಗಳನ್ನು ಗೆದ್ದಿಲ್ಲ. ಬಿಜೆಪಿ ಭದ್ರಕೋಟೆ ಎಂದು ಪರಿಗಣಿಸಲಾದ ಕೊಯಮತ್ತೂರಿನಲ್ಲಿ ಕೂಡ ಬಿಜೆಪಿ ಗೆಲ್ಲಲು ಆಗಿಲ್ಲ. ಅಣ್ಣಾಮಲೈ ಐಪಿಎಸ್ ಗೆ ರಾಜೀನಾಮೆ ನೀಡಿದ ನಂತರ 2020ರಲ್ಲಿ ಬಿಜೆಪಿ ಸೇರಿದ್ದರು. 2021ರಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಎಲ್. ಮುರುಗನ್ ಅವರನ್ನು ಕೇಂದ್ರ ರಾಜ್ಯ ಸಚಿವರಾಗಿ ನೇಮಿಸಿದ ಕೂಡಲೇ, ಅಣ್ಣಾಮಲೈ ಅವರು ತಮಿಳುನಾಡು ರಾಜ್ಯಾಧ್ಯಕ್ಷರಾದರು.