ಮಹೇಂದ್ರ ಸಿಂಗ್ ಧೋನಿ 2025ರ ಐಪಿಎಲ್ ಅಂಗಳದಲ್ಲಿ ಕಾಣಿಸಲಿದ್ದಾರಾ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿಯೂ ಅವರು ಅಂಗಳದಲ್ಲಿ ಕಾಣಿಸಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ.
ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಪರ ಧೋನಿ ರಿಟೈನ್ ಆಗಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಮಹೇಂದ್ರ ಸಿಂಗ್ ಧೋನಿ ಮುಂಬರುವ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್ ಖಚಿತಪಡಿಸಿದ್ದಾರೆ. ಧೋನಿ ಅವರು ಅಂಗಳದಲ್ಲಿ ಇಳಿಯಲು ಉತ್ಸುಕರಾಗಿದ್ದು, ಅದಕ್ಕಿಂತ ದೊಡ್ಡ ಸಂತಸ ನಮಗೆ ಮತ್ತೇನೂ ಇಲ್ಲ ಎದಿದ್ದಾರೆ.
ಧೋನಿ ಅವರನ್ನು ಅನ್ ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲಿದ್ದಾರೆ ಎಂದು ಕೂಡ ಮಾಹಿತಿ ಬಹಿರಂಗವಾಗಿದೆ. ಹೀಗಾಗಿ ಧೋನಿ ಕೇವಲ 4 ಕೋಟಿ ರೂ.ಗೆ ತಂಡದಲ್ಲೇ ಉಳಿಯಲಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ಮೆಗಾ ಹರಾಜಿನ ನಿಯಮಗಳಂತೆ, ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದು 5 ವರ್ಷ ಕಳೆದಿದ್ದರೆ ಅವರನ್ನು ಅನ್ಕ್ಯಾಪ್ಡ್ ಆಟಗಾರರ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅದರಂತೆ ಇದೀಗ ಧೋನಿ ನಿವೃತ್ತರಾಗಿ 5 ವರ್ಷ ಕಳೆದಿವೆ. ಹೀಗಾಗಿ ಸಿಎಸ್ಕೆ ಮಹೇಂದ್ರ ಸಿಂಗ್ ಧೋನಿಯನ್ನು ಅನ್ಕ್ಯಾಪ್ಡ್ ಪಟ್ಟಿಯಲ್ಲಿ ರಿಟೈನ್ ಮಾಡಿಕೊಳ್ಳಲಿದೆ ಎನ್ನಲಾಗಿದೆ.
ಇಲ್ಲಿ ಅನ್ಕ್ಯಾಪ್ಡ್ ಆಟಗಾರರ ಪಟ್ಟಿಯಲ್ಲಿ ರಿಟೈನ್ ಆಗುವ ಆಟಗಾರರಿಗೆ ಕೇವಲ 4 ಕೋಟಿ ರೂ. ಮಾತ್ರ ನೀಡಿದರೆ ಸಾಕು. ಇದರಿಂದ ಒಟ್ಟು ಹರಾಜು ಮೊತ್ತದಲ್ಲಿ ಹೆಚ್ಚುವರಿ ಕಡಿತವನ್ನು ತಡೆಯಬಹುದು. ಹೀಗಾಗಿ ಧೋನಿ ಈ ಬಾರಿಯೂ ನಾಲ್ಕು ಕೋಟಿ ರೂ.ಗೆ ತಂಡದಲ್ಲೇ ಉಳಿಯಬಹುದು ಎನ್ನಲಾಗುತ್ತಿದೆ.