ಪುತ್ತೂರು: ‘ನಮ್ಮಲ್ಲಿರುವ ಸಂಶಯಗಳನ್ನು ಬಿಟ್ಟುಬಿಡಿ, ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಎಸಗುತ್ತಿರುವ ವಿಚಾರದಲ್ಲಿ ಎಲ್ಲರೂ ಏಕ ಮನಸ್ಕರಾಗಿ ದೃಢವಾಗಿ ನಿಂತು ಕ್ಷೇತ್ರವನ್ನು ಉಳಿಸಲು ಮುಂದಾಗಬೇಕು’ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.
ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರುಗದ್ದೆಯಲ್ಲಿ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲಿನ ಅವಹೇಳನ ಖಂಡಿಸಿ ಧರ್ಮಸ್ಥಳ ಧರ್ಮ ಸಂರಕ್ಷಣಾ ವೇದಿಕೆ ಪುತ್ತೂರು ತಾಲ್ಲೂಕು ವತಿಯಿಂದ ನಡೆದ ಜನಾಗ್ರಹ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಧರ್ಮಸ್ಥಳದ ಬಗ್ಗೆ ಕೃತಕತೆಯನ್ನು ಬಿಂಬಿಸಿ ಅಪಮಾನಿಸುವ ಷಡ್ಯಂತ್ರ ನಡೆಯಿತು. ಇದನ್ನೆಲ್ಲಾ ನೋಡಿಯೂ ನಾವು ಸುಮ್ಮನಿರುವುದೇ ದುರಂತ. ಕೆಲವರು ಅಹಂನಿಂದ ಮಾಡುತ್ತಿರುವ ಈ ಕೃತ್ಯಗಳಿಗೆ ಧರ್ಮಸ್ಥಳ ಕ್ಷೇತ್ರದ ದೇವರು ಕೆಲವೇ ದಿನಗಳಲ್ಲಿ ಇತಿಶ್ರೀ ಹಾಡಲಿದ್ದಾರೆ ಎಂದಿದ್ದಾರೆ.
ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಸರ್ಕಾರಗಳು ಮಾಡಬಹುದಾದ ಕಾರ್ಯಗಳನ್ನು ಧರ್ಮಸ್ಥಳದ ಒಂದು ದೇವಾಲಯ ಮಾಡಿದೆ ಎಂದು ಹೇಳಿದ್ದಾರೆ.
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ರಾಜ್ಯ ಸರ್ಕಾರ ಎಸ್‌ಐಟಿ ತನಿಖೆ ನಡೆಸುವ ಮೂಲಕ ಕ್ಷೇತ್ರಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಿದೆ. ಅತ್ಯಾಚಾರಕ್ಕೊಳಗಾಗಿ ಮೃತಪಟ್ಟ ಸೌಜನ್ಯಳಿಗೂ ನ್ಯಾಯ ಸಿಗಬೇಕಾಗಿದೆ ಎಂದು ಹೇಳಿದ್ದಾರೆ.
ಮಾಜಿ ಶಾಸಕ ಸಂಜೀವ ಮಠಂದೂರು, ವಕೀಲ ಕೇಶವ ಗೌಡ, ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿದರು.