ಬೆಂಗಳೂರು : ಹಿಂದೂ ಧಾರ್ಮಿಕ ಕ್ಷೇತ್ರದ ಅಪಪ್ರಚಾರ ಆಗಬಾರದು ಎಂಬುದು ಬಿಜೆಪಿ ನಿಲುವಾಗಿದೆ. ಇದರ ಹಿಂದೆ ಹಿಂದೆ ಯಾರ್ಯಾರು ಇದ್ದಾರೆ ಎಂಬುದನ್ನು ಎಸ್ ಐಟಿ ಪತ್ತೆ ಹಚ್ಚುತ್ತದೆ ಎಂಬ ವಿಶ್ವಾಸ ಇದೆ ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಹೇಳಿದ್ದಾರೆ.
ವರದಿಗಾರರಿಗೆ ಸ್ಪಂದಿಸಿ ಮಾತನಾಡಿದ ಸುನೀಲ್, ಈ ಬಗ್ಗೆ ನಾವು ಸದನದ ಒಳಗೂ, ಹೊರಗೂ ಆಕ್ಷೇಪ ಎತ್ತಿದ್ದೇವೆ. ಷಡ್ಯಂತ್ರ್ಯ ತನಿಖೆಯಿಂದ ಹೊರ ಬರಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ದಸರಾ ಉದ್ಘಾಟನೆಗೆ ಸಾಹಿತಿ ಭಾನು ಮುಷ್ತಾಕ್ ಅವರನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು, ದಸರಾ ನಾಡಿದ ಜನ ಪೂಜಿಸುವ ಸಂಸ್ಕೃತಿ, ಉದ್ಘಾಟನೆ ಹೇಗೆ ಆಗಬೇಕು ಎಂಬುದನ್ನು ಜವಾಬ್ದಾರಿಯುತ ಸರ್ಕಾರ ತೀರ್ಮಾನ ಮಾಡಬೇಕು. ವಿಗ್ರಹ ಆರಾಧನೆಯನ್ನು ಭಾನು ಮುಷ್ತಾಕ್ ಒಪ್ಪಿಕೊಳ್ಳುತ್ತಾರೆಯೇ ಎನ್ನುವುದನ್ನು ಸರ್ಕಾರ ಖಾತರಿಪಡಿಸಿಕೊಳ್ಳಬೇಕಿತ್ತು. ಆದರೇ ಈ ಸರ್ಕಾರಕ್ಕೆ ಹಿಂದೂಗಳಿಗೆ ಅಪಮಾನ ಮಾಡುವುದೇ ಉದ್ದೇಶ. ಧರ್ಮಸ್ಥಳ ಪ್ರಕರಣದಲ್ಲಿ ಕೂಡಾ ಇದೇ ಆಗಿತ್ತು. ದಸರಾ ಉದ್ಘಾಟನೆ ಈಗ ಅದರ ಮುಂದುವರಿದ ಭಾಗ ಎಂದು ಟೀಕಿಸಿದ್ದಾರೆ.
ಆರ್ ಎಸ್ ಎಸ್ ಗೀತೆಯನ್ನು ಸದನದಲ್ಲಿ ಹಾಡಿದ್ದಕ್ಕೆ ಡಿ.ಕೆ. ಶಿವಕುಮಾರ್ ಕ್ಷಮೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಡಿ.ಕೆ. ಶಿವಕುಮಾರ್ ಆರ್ ಎಸ್ ಎಸ್ ನ ಎರಡು ಸಾಲು ಹೇಳಿದ್ದಕ್ಕೆ ಕಾಂಗ್ರೆಸ್ ನಲ್ಲಿ ಇಷ್ಟು ಅಲ್ಲೋಲ ಕಲ್ಲೋಲ ಆಗಿದೆ. ಇನ್ನು ಪೂರ್ತಿ ಹೇಳುತ್ತಿದ್ದರೆ ಇನ್ನೇನು ಆಗುತ್ತಿತ್ತೋ ಗೊತ್ತಿಲ್ಲ. ಡಿ.ಕೆ. ಶಿವಕುಮಾರ್ ಆಧಿಕಾರದ ಆಸೆಗೆ ಕ್ಷಮೆ ಕೇಳಿದ್ದಾರೆ ಎಂದಿದ್ದಾರೆ.